ಕಡಬ: ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗದ ವತಿಯಿಂದ ವನ್ಯಜೀವಿ ಸಪ್ತಾಹದ ಪ್ರಯುಕ್ತ ಜಿಲ್ಲಾ ಕಡಬ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ದಿನಾಂಕ 07 ಅಕ್ಟೋಬರ್ 2024ರಂದು ಕಡಬದ ಸೈಂಟ್ ಜೋಕಿಮ್ ಸಭಾಭವನದಲ್ಲಿ ಜರಗಿತು.
ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ವಿಮಲ್ ಬಾಬು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಡಿ. ಸಿ. ಎಫ್. ಅಂಟೋನಿ ಮರಿಯಪ್ಪ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿದರು. ಉಪ ವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ಇದರ ಗೌರವಾಧ್ಯಕ್ಷ ಸಂತೋಷ್ ರೈ ಹಾಗೂ ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಗಳ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ, ಸುಳ್ಯ ಎ. ಸಿ. ಎಫ್. ಪ್ರವೀಣ್ ಕುಮಾರ್ ಶೆಟ್ಟಿ ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ್ ಅಗಸಿ ಪಂಜ, ಮೋತಿಲಾಲ್ ಸುಬ್ರಹ್ಮಣ್ಯ, ಶಿವಾನಂದ ಶಿಂಪಿ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ ಸುಮಾರು 170 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಯನ್ನು 1ನೇ ತರಗತಿಯಿಂದ 3ನೇ ತರಗತಿವರೆಗೆ ಹಾಗೂ 4ನೇ ತರಗತಿಯಿಂದ 7ನೇ ತರಗತಿಗಳವರೆಗೆ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಮೊದಲ ವಿಭಾಗದಲ್ಲಿ ‘ಭಾರತೀಯ ಹಬ್ಬ’ ಹಾಗೂ ಎರಡನೇ ವಿಭಾಗದಲ್ಲಿ ‘ಕಡಲ ಕಿನಾರೆ’ ಸ್ಪರ್ಧೆಯ ವಿಷಯವಾಗಿತ್ತು. ಮೊದಲ ವಿಭಾಗದಲ್ಲಿ ಆಹಾನ್ ಪ್ರಥಮ, ಶಾನ್ವಿ ದ್ವಿತೀಯ ಹಾಗೂ ಆದಿತ್ಯ ತಂತ್ರಿ ತೃತೀಯ ಸ್ಥಾನ ಪಡೆದರು. ಎರಡನೇ ವಿಭಾಗದಲ್ಲಿ ಹನ್ಸಿಕಾ ಪ್ರಥಮ, ಸಚಿ ಕೆ. ದ್ವಿತೀಯ ಹಾಗೂ ಮನ್ವಿತ್ ಕೆ. ಎಲ್. ತೃತೀಯ ಬಹುಮಾನವನ್ನು ಪಡೆದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗೀಶ್ ಸುಬ್ರಹ್ಮಣ್ಯ ಸ್ವಾಗತಿಸಿ, ಯಶೋಧರ ಪಂಜ ನಿರೂಪಿಸಿ, ಅಜಿತ್ ಕುಮಾರ್ ಪಂಜ ವಂದಿಸಿದರು.