ಗರಿಗೆದರಿ ನರ್ತಿಸುತ್ತಿರುವ ನವಿಲು, ಮೋಡದ ಮರೆಯಿಂದ ಇಣುಕುತ್ತಿರುವ ಸೂರ್ಯ, ಮರದಿಂದ ಮರಕ್ಕೆ ಹಾರಿ ಬರುತ್ತಿರುವ ಪಕ್ಷಿಗಳು, ವರ್ಷಧಾರೆಗೆ ಪ್ರಕೃತಿಯ ರಮ್ಯ ನೋಟ, ಸರೋವರದ ವಿಹಂಗಮ ದೃಶ್ಯ, ಆಕಾಶದೆತ್ತರಕ್ಕೆ ನಿಂತ ಪರ್ವತಗಳ ಸಾಲು, ಮರಗಿಡಗಳಲ್ಲಿ ಅರಳಿ ನಿಂತ ಹೂವುಗಳು ಹೀಗೆ ಒಂದಕ್ಕಿಂತ ಒಂದು ಕಣ್ಮನ ಸೆಳೆಯುವ ಚಿತ್ರಗಳು, ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕು ಎಂಬ ಚಿತ್ರಗಳ ಸರಣಿ ಮಾಲೆಯನ್ನು ಕಲಾಸಕ್ತರ ಮಡಿಲಿಗೆ ಅರ್ಪಿಸಿದ್ದಾರೆ ಹವ್ಯಾಸಿ ಕಲಾವಿದೆ ಶ್ರೀಮತಿ ಭಾರತಿ ಭಂಡಾರಿ.
ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯವರು. ಪ್ರಸ್ತುತ ಈಗ ಬೆಂಗಳೂರಿನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಾ ತರಗತಿಗೆ ಹೋಗಿ ಅಧ್ಯಯನ ಮಾಡಿದವರಲ್ಲ. ಇವರಿಗೆ ಕಲಾಸಕ್ತಿ ಮೂಡಿದ್ದು ಬಾಲ್ಯದಲ್ಲಿ ಇವರ ತಾಯಿ ಮಾಡಿರುವ ಚಿಕ್ಕಪುಟ್ಟ ಕಲಾಕೃತಿಗಳನ್ನು ನೋಡಿ. ಅದೇ ರೀತಿ ಕಲಾಕೃತಿಯನ್ನು ತಾವು ಕೂಡ ಮಾಡಬೇಕೆಂಬ ಹಂಬಲವನ್ನು ಮೂಡಿಸಿಕೊಂಡರು. ಬಾಲ್ಯದಲ್ಲಿ ಇವರ ಪ್ರತಿಭೆಗೆ ನೀರೆರೆದು ಪೋಷಿಸಿದವರು ಇವರ ತಾಯಿ. ನಂತರದ ದಿನಗಳಲ್ಲಿ ತಾವು ನೋಡಿದ ತಿಳಿದ ಹಲವಾರು ವಿಷಯವನ್ನು ಕಲಾಕೃತಿಗಳಲ್ಲಿ ಬಿಂಬಿಸುವುದರ ಮೂಲಕ ಒಂದಕ್ಕಿಂತ ಒಂದು ವಿನೂತನ ಶೈಲಿಯ ಕಲಾಕೃತಿಗಳನ್ನು ತಮಗರಿವಿಲ್ಲದಂತೆ ಚಿತ್ರಿಸಿ ಕಲಾಸಕ್ತರ ಮಡಿಲಿಗೆ ಇದ್ದಾರೆ. ಗುರಿ ಇದ್ದರೆ ಗರಿ ಮಾಡಿಸಿಕೊಳ್ಳಬಹುದು. ಎಲ್ಲದಕ್ಕೂ ಆಸಕ್ತಿ ಬಹಳ ಮುಖ್ಯ.
ಶ್ರೀಮತಿ ಭಾರತಿಯವರ ವಿಭಿನ್ನ ಕಲಾಕೃತಿಗಳನ್ನು ನೋಡಿದಾಗ ಹವ್ಯಾಸಿ ಕಲಾವಿದರ ಕಲಾಕೃತಿಗಳು ಎಂದು ಅನಿಸುವುದೇ ಇಲ್ಲ. ಇವರ ಕಲಾಕೃತಿಗಳಲ್ಲಿ ನೈಜತೆ, ಪರಿಪೂರ್ಣತೆ ಎದ್ದು ಕಾಣುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ತಾವು ರಚಿಸಿರುವ ಕಲಾಕೃತಿಗಳನ್ನು ತೋರಿಸಿ ಅವರಲ್ಲಿಯೂ ಕೂಡ ಕಲಾಸಕ್ತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ತಾವು ನೋಡಿದ್ದನ್ನು ಅನುಭವಿಸಿದ್ದನ್ನು ಕಲಾಕೃತಿಗಳ ಮೂಲಕ ಬಿಂಬಿಸಿದ್ದಾರೆ. ಜಲವರ್ಣ ಮಾಧ್ಯಮದ ಕಲಾಕೃತಿಗಳು ಆಕರ್ಷಣೀಯ, ನೈಜತೆಯನ್ನು ಪ್ರತಿಬಿಂಬಿಸುವುದೇ ಇವರ ಕಲಾಕೃತಿಗಳ ವಿಶೇಷ.
ಕಲಾವಿದೆ ಭಾರತಿ ಭಂಡಾರಿಯವರು ಹೇಳುವ ಹಾಗೆ ಪರಿಸರ ಕುಟುಂಬ, ಜೀವನ ಇವೆಲ್ಲವೂ ತನ್ನ ಕಲಾಕೃತಿಗಳಿಗೆ ಪ್ರೇರಣೆ ಎಂದು ಹೇಳಿದರೆ ತಪ್ಪಾಗಲಾರದು. ಇವರು ರಚಿಸಿದ ಕಲಾಕೃತಿಗಳಿಂದ ಹಲವಾರು ವಿದ್ಯಾರ್ಥಿಗಳು ಪ್ರೇರೇಪಿತರಾಗಿ ಭಿನ್ನ ಕಲಾಕೃತಿಗಳನ್ನು ರಚಿಸುತ್ತಿರುವುದು ವಿಶೇಷ. ಕಲೆಯೆಂದರೆ ಹಾಗೆಯೇ ಅಲ್ಲವೇ ? ಯಾರನ್ನಾದರೂ ಹೇಗೆ ಬೇಕಾದರೂ ಆಕರ್ಷಿಸಬಹುದು. ಆದರೆ ಸರಿಯಾದ ಮಾರ್ಗದರ್ಶಕರು ಗುರಿ ಪ್ರೇರಣೆ ಮಾತ್ರ ಇರಬೇಕು. ಹವ್ಯಾಸಿ ಕಲಾವಿದೆ ಭಾರತಿಯವರು ಇನ್ನು ಮುಂದೆ ವಿಭಿನ್ನ ಮಾದರಿಯ ಕಲಾಕೃತಿಗಳನ್ನು ರಚಿಸುವಂತೆ ಆಗಲಿ. ಇವರ ಪ್ರಯತ್ನಕ್ಕೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
ಬಳಕೂರು ವಿ.ಎಸ್. ನಾಯಕ, ದೂರವಾಣಿ ಸಂಖ್ಯೆ :9448687636
ಪ್ರೊ. ವಿ.ಎಸ್. ನಾಯಕ ಬಳಕೂರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಳಕೂರಿನವರು. ಪ್ರಸ್ತುತ ಈಗ ಸುಮಾರು 20 ವರ್ಷಗಳಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಸುಮಾರು 20 ವರ್ಷಗಳಿಂದ ಕಲೆ, ಪರಿಸರ ಶಿಕ್ಷಣ ಮತ್ತು ವಿಜ್ಞಾನ ಇದಕ್ಕೆ ಸಂಬಂಧಿಸಿದ ಅಂಕಣಗಳು, ಕಲಾ ಲೇಖನಗಳು, ಪ್ರತಿಭಾ ಅಂಕಣ ಸೇರಿದಂತೆ ನಮ್ಮ ನಾಡಿನ ಪ್ರಖ್ಯಾತ ದಿನ ಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ಮಾಸಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಇವರು ಬರೆದಿರುವ ಒಂದು ಕಲಾ ಲೇಖನವು ಬೆಂಗಳೂರು ನಗರ ವಿಶ್ವವಿದ್ಯಾಲಯ ಪದವಿಯ ಪಠ್ಯವಾಗಿದೆ. ಇವರ ಸೇವೆಯನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾ ರತ್ನ ಪುರಸ್ಕಾರ, ಸ್ವಾಮಿ ವಿವೇಕಾನಂದ ಪ್ರಶಸ್ತಿ, ಸರ್ವೆಪಲ್ಲಿ ರಾಧಾಕೃಷ್ಣನ್ ಪುರಸ್ಕಾರ ಮತ್ತು ಕಾಯಕ ಬಸವಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.
1 Comment
ಅದ್ಭುತವಾಗಿದೆ ,ನಿಮ್ಮ ಎಲ್ಲಾ ಕಲಾಕೃತಿಗಳು,