ಉಡುಪಿ: ಹಿರಿಯ ಜಾನಪದ ವಿದ್ವಾಂಸರಾದ ಡಾ. ಹರಿಕೃಷ್ಣ ಭರಣ್ಯ ಇವರು 2022ನೇ ಸಾಲಿನ ಮತ್ತು ಡಾ. ಎನ್. ಆರ್. ನಾಯಕ್ 2023ನೇ ಸಾಲಿನ ‘ಕೇಶವ ಭಟ್ಟ ಪ್ರಶಸ್ತಿ’ಗೆ ಆಯ್ಕೆಯಾಗಿರುವುದಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ.
ಡಾ. ಎನ್. ಆರ್. ನಾಯಕ್
ಡಾ. ಎನ್. ಆರ್. ನಾಯಕ್ ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿಯವರು. ಇವರು ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ 1964ರಿಂದ 1984ರ ವರೆಗೆ ಪ್ರಾಧ್ಯಾಪಕರಾಗಿ 1984ರಿಂದ 1993ರ ವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಪಿ.ಎಚ್.ಡಿ ಮಾರ್ಗದರ್ಶಕರೂ ಆಗಿದ್ದರು. ಅಲ್ಲದೆ ಕರ್ನಾಟಕ ಜಾನಪದ ವಿ.ವಿಯ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಸಂಘಸಂಸ್ಥೆಗಳ ಅಧ್ಯಕ್ಷರಾಗಿ, ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನುಭವ ಹೊಂದಿದ್ದಾರೆ. ಕುಮಟಾದಲ್ಲಿ ನಡೆದ ಉ.ಕ ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನ, ಗೋಕರ್ಣದಲ್ಲಿ ನಡೆದ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಶಿರಸಿಯಲ್ಲಿ ನಡೆದ 27ನೆಯ ಅಖಿಲಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸುವ ಅವಕಾಶ ದೊರೆತದ್ದು ಇವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ. ಇವರು ‘ಜಾನಪದ ದೀಪಾರಾಧನೆ’ ಎನ್ನುವ ಶೀರ್ಷಿಕೆಯಲ್ಲಿ 110ಕ್ಕೂ ಹೆಚ್ಚು ಕಲಾವಿದರನ್ನು ಗುರುತಿಸಿ ಗೌರವಿಸಿದ್ದಾರೆ. ಎನ್.ಆರ್.ನಾಯಕ್ ಅವರು ಸುಮಾರು 98ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ 54 ಗ್ರಂಥಗಳು ಜಾನಪದಕ್ಕೆ ಸಂಬಂಧಿಸಿದವುಗಳಾಗಿವೆ. ಉಳಿದವುಗಳು ನಾಟಕ, ಸಾಹಿತ್ಯ, ಸಂಸ್ಕೃತಿ ಮತ್ತು ಅನುಭವ ಕಥನಗಳು ಇತ್ಯಾದಿ ಕ್ಷೇತ್ರಕ್ಕೆ ಸಂಬಂಧಪಟ್ಟ ಕೃತಿಗಳು. ಅಲ್ಲದೆ ಹಲವು ಗ್ರಂಥಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.
ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕು.ಶಿ ಜಾನಪದ ಪ್ರಶಸ್ತಿ, ಭೂತಾಳ ಪಾಂಡ್ಯ ಪ್ರಶಸ್ತಿಗಳನ್ನೊಳಗೊಂಡಂತೆ ಹಲವಾರು ಪ್ರಶಸ್ತಿಗಳು, ಸನ್ಮಾನಗಳು ಸಂದಿವೆ.
ಡಾ. ಹರಿಕೃಷ್ಣ ಭರಣ್ಯರು
ಡಾ. ಹರಿಕೃಷ್ಣ ಭರಣ್ಯರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯವರು. ಇವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ತುಳು ನಿಘಂಟು ಯೋಜನೆಯಲ್ಲಿ ಸಂಶೋಧಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮದುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ದುಡಿದು ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಹವಿಗನ್ನಡ ಮಾತೃಭಾಷೆಯ ಭರಣ್ಯರು ಕನ್ನಡವಲ್ಲದೆ ಇಂಗ್ಲಿಷ್, ತಮಿಳು, ತುಳು, ಮಲಯಾಳಂ ಮತ್ತು ಹಿಂದಿಭಾಷೆಗಳನ್ನು ಬಲ್ಲವರು. ‘ಸಂಶೋಧನೆ – ಪ್ರವೇಶ’, ‘ಸಂಶೋಧನ ವಿಧಾನ’, ‘ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ’, ‘ಹವ್ಯಕಾಧ್ಯಯನ’, ‘ಕಾವೇರಿಕಾನ ಕೃಷ್ಣ ಭಟ್ಟರ ಬದುಕು’ ಇತ್ಯಾದಿ ಅವರ ಕೃತಿಗಳು. ‘ದೊಡ್ಡಜಾಲು’ ಎಂಬ ಹವಿಗನ್ನಡದ ಪ್ರಥಮ ಕಾದಂಬರಿ ಜೊತೆಗೆ ನಾಟಕಗಳು, ಕವಿತೆಗಳು, ಲಲಿತ ಪ್ರಬಂಧಗಳು ಮೊದಲಾದ ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಸಮೃದ್ಧವಾಗಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಇವರಿಗೆ ‘ಹವಿಗನ್ನಡ ಸೂರಿ’, ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’, ‘ಬಾಳಿಲ ಪ್ರಶಸ್ತಿ’, ‘ಕವಿ ಮಂದಾರ ಸನ್ಮಾನ ಪ್ರಶಸ್ತಿ’ಯನ್ನೊಳಗೊಂಡಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅವರು ಹೊನ್ನಾವರದಲ್ಲಿ ನಡೆದ ಪ್ರಥಮ ಹವಿಗನ್ನಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.