ಇಳೆಯಿಂದ ಮೊಳಕೆ ಒಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ
ಕನ್ನಡ ನಾಡು ಋಷಿಗಳ ಬೀಡು. ಕನ್ನಡ ನಾಡಿನಲ್ಲಿ ಆನೇಕ ಸತ್ಪುರುಷರು ಹುಟ್ಟಿ ತ್ಯಾಗಜೀವನ ನಡೆಸಿ ಇತರರಿಗೆ ಆದರ್ಶರಾಗಿರುವವರಲ್ಲಿ ಡಾ. ದೇವನಹಳ್ಳಿ ವಂಕಟರಮಣಯ್ಯ ಗುಂಡಪ್ಪನವರು ಒಬ್ಬರು. 17-03-1887ರಂದು ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟರಮಣಯ್ಯ ತಾಯಿ ಅಲಮೇಲಮ್ಮ. ಪ್ರೌಢ ಶಾಲೆಯಲ್ಲಿ ಓದುವಾಗಲೇ ಡಿ.ವಿ.ಜಿ.ಯವರಿಗೆ ಮದುವೆಯಾಯಿತು. ಹೆಂಡತಿಯ ಹೆಸರು ಭಾಗೀರಥಮ್ಮ. ಅವರ ಪ್ರಸಿದ್ದ ಕೃತಿಯಾದ “ಮಂಕುತಿಮ್ಮನ ಕಗ್ಗ”ದಲ್ಲಿ ‘ತಿಮ್ಮ’ ಎಂಬ ಹೃದಯ ಸ್ಪರ್ಶಿ ಹೆಸರು ಅವರ ಪ್ರೀತಿಯ ಸೋದರ ಮಾವ ತಿಮ್ಮಪ್ಪನವರದೇ.
ಡಿ.ವಿ.ಜಿ.ಯವರ ಅನನ್ಯ ಸಾಧನೆಗಳ ನಡುವೆ ಶ್ರೇಷ್ಟವೆನಿಸಿರುವುದು ತತ್ವಾಧಾರಿತವಾದ ಅವರ ಕಾವ್ಯಗಳಾದ “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಎನ್ನುವುದು ಸರ್ವವಿದಿತ. ಪತ್ರಿಕೋದ್ಯಮವೇ ಸರ್ವಸ್ವವೆಂದು ತಿಳಿದಿದ್ದ ಡಿ.ವಿ.ಜಿ. ಸಾಹಿತ್ಯಲೋಕಕ್ಕೆ ಪ್ರವೇಶಿಸಿದ್ದು ಮಾತ್ರ ಅನಿರೀಕ್ಷಿತವೇ ಆದರೂ ಅವರೊಬ್ಬ ದಾರ್ಶನಿಕ ಬರಹಗಾರರು.
ಚಿಕ್ಕಂದಿನಿಂದಲೂ ಕನ್ನಡ, ಸಂಸ್ಕೃತ, ಇಂಗ್ಲೀಷ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದ ಡಿ.ವಿ.ಜಿ.ಯವರು ಮೆಟ್ರಿಕ್ಯುಲೇಷನ್ ಪರೀಕ್ಷೆಯ ನಂತರ ತಮ್ಮ ಶಾಲಾ ಶಿಕ್ಷಣಕ್ಕೆ ಎಳ್ಳು ನೀರು ಬಿಟ್ಟರು. ದಿನನಿತ್ಯದ ಖರ್ಚಿಗಾಗಿ ಏನಾದರೂ ಮಾಡಲೇ ಬೇಕಿದ್ದಾಗ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಕೋಲಾರ ಚಿನ್ನದ ಗಣಿಯಲ್ಲಿ ಸೋಡಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಅಲೆದರು.
ಆದರೆ ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಪಾಂಡಿತ್ಯ ಗಳಿಸಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು. ಇಂಗ್ಲೀಷ್ ಪತ್ರಿಕೆಗಳು ಅವರಿಗೆ ಅದೃಷ್ಟದ ಬಾಗಿಲನ್ನೇ ತೆರೆದವು. ಇವರು ಅಂದಿನ ಪ್ರಸಿದ್ಧ “ಮೈಸೂರು ಟೈಮ್” ಪತ್ರಿಕೆಯ ಸಹಾಯಕ ಸಂಪಾದಕರಾಗಿ ತಮ್ಮ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲನ್ನು ಮೀರಿ ನಿಂತರು.
ಡಿ.ವಿ.ಜಿ.ಯವರು ಸಾಹಿತ್ಯದ ಜೊತೆಗೆ ಚರಿತ್ರೆ, ರಾಜನೀತಿ, ತತ್ವ ಜ್ಞಾನ, ಪ್ರಜಾಪ್ರಭುತ್ವ ಮುಂತಾದ ಹಲವಾರು ವಿಷಯಗಳನ್ನು ಕುರಿತು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆದರು. ಅವುಗಳಲ್ಲಿ “ವಸಂತ ಕುಸುಮಾಂಜಲಿ”, “ನಿವೇದನಾ”, “ಉಮರನ ಒಸಗೆ”, “ಮಂಕುತಿಮ್ಮನ ಕಗ್ಗ” ಇತ್ಯಾದಿ ಪ್ರಸಿದ್ದ ಕಾವ್ಯಗಳ ಜೊತೆಗೆ “ವಿದ್ಯಾರಣ್ಯ ವಿಜಯ” ಮತ್ತು ತಿಲೋತ್ತಮೇ” ಎಂಬ ನಾಟಕಗಳನ್ನು ಬರೆದರು. “ದಿವಾನ್ ರಂಗಾಚಾರ್ಲು”, “ಗೋಪಾಲಕೃಷ್ಣ ಗೋಖಲೆ” ಹಾಗೂ “ಮೈಸೂರಿನ ದಿವಾನರು” ಹೀಗೆ ಹಲವು ಕೃತಿಗಳನ್ನು ರಚಿಸಿದರು.
ಡಿ.ವಿ.ಜಿ.ಯವರ ಸಾಹಿತ್ಯ ಕೃಷಿಗೆ 1974ರಲ್ಲಿ ಭಾರತ ಸರಕಾರವು “ಪದ್ಮ ಭೂಷಣ” ಪ್ರಶಸ್ತಿ ನೀಡಿತು. 1961ರಲ್ಲಿ ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಮೈಸೂರು ವಿಶ್ವ ವಿದ್ಯಾಲಯ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತು. 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಹಾಗೂ ಭಾರತೀಯ ಅಂಚೆ ಸೇವೆ ಡಿ.ವಿ.ಜಿ.ಯವರ ನೆನಪಿಗಾಗಿ 1988ರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿತು.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ
ಕನ್ನಡ ಸಾಹಿತ್ಯ ಲೋಕದ ಭೀಷ್ಮರೆನೆಸಿದ ಡಿ.ವಿ.ಜಿ.ಯವರು ಹಿರಿಯ ವೇದಾಂತಿ ಹಾಗೂ ರಾಜ್ಯಶಾಸ್ತ್ರದಲ್ಲಿ ಆಳವಾದ ತಿಳುವಳಿಕೆ ಉಳ್ಳವರಾಗಿದ್ದರು. ಅವರು ಬರೆದ ಕವಿತೆಗಳು “ಸತ್ಯಂ ಶಿವಂ ಸುಂದರಂ”. 07-10-1975ರಲ್ಲಿ ಅದ್ಭುತ ಮೇಧಾವಿ, ಅತೀವ ಪಾಂಡಿತ್ಯದ ಗಣಿ, ಗೋಖಲೆ ಸಂಸ್ಥೆಯ ಸ್ಥಾಪಕ ಡಿ.ವಿ.ಜಿ.ಯವರು ನಮ್ಮನ್ನೆಲ್ಲ ಅಗಲಿದರು. ಇಹದ ವ್ಯವಹಾರ ತ್ಯಜಿಸಿ 48 ವರ್ಷಗಳು ಸಂದರೂ ನಿತ್ಯ ನೂತನವಾದ ಅವರ ಕೃತಿಗಳು ಈಗಲೂ ನಮಗೆ ಜ್ಞಾನ ದೀಪವಾಗಿದೆ ಬದುಕಿಗೆ ದಾರಿದೀಪವಾಗಿದೆ.
ಶ್ರೀ ಪ್ರಶಾಂತ್ ಕುಮಾರ್ ರೈ
ಅಧ್ಯಾಪಕರು, ಬೆಸೆಂಟ್ ಪ್ರೌಢ ಶಾಲೆ ಸಾಹಿತ್ಯಾಸಕ್ತರು, ಮತ್ತು ನಿರೂಪಕರು.