ಕಾಸರಗೋಡು : ಶ್ರೀ ಪುರಂದರ ದಾಸ ಸಂಗೀತ ಕಲಾ ಮಂದಿರ ಕಾಸರಗೋಡು ಇದರ ಆಶ್ರಯದಲ್ಲಿ ದ್ವಿಂಶತಿ ಸಂಗೀತ ಆರಾಧನೋತ್ಸವವು ದಿನಾಂಕ 10-02-2024 ಮತ್ತು 11-02-2024ರಂದು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ವಿಜ್ಬ್ರಂಬಣೆಯಿಂದ ಜರಗಿತು. ಆರಾಧನೆಯಲ್ಲಿ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ, ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಮತ್ತು ಗಾಯಕ ಶಿಖಾಮಣಿ ಹರಿಕೇಶ ನಲ್ಲೂರು ಮುತ್ತಯ್ಯ ಭಾಗವತರ ಕೀರ್ತನೆಗಳನ್ನು ಆಲಾಪಿಸಲಾಯಿತು.
ದಿನಾಂಕ 10-02-2024ರಂದು ಬೆಳಗ್ಗೆ 9 ಗಂಟೆಗೆ ಮೃದಂಗ ವಿದ್ವಾನ್ ಡಾ. ಶಂಕರ್ ರಾಜ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜತೆಯಲ್ಲಿ ಕಲ್ಮಾಡಿ ಸದಾಶಿವ ಆಚಾರ್ಯ, ಪ್ರಭಾಕರ್ ಕುಂಜಾರ್, ಟಿ.ಕೆ. ವಾಸುದೇವ ಕಾಞಂಗಾಡ್, ಶ್ರೀಜಿತ್ ಕಾಞಂಗಾಡ್, ಕೆರೆಮನೆ ಮನಮೋಹನ, ಶ್ರೀಮತಿ ಸರಸ್ವತಿ ಕೃಷ್ಣ, ಶ್ರೀಪತಿ ರಂಗಾ ಭಟ್, ಕಲ್ಮಾಡಿ ಪೂರ್ಣಪ್ರಜ್ಞ ಕೆ.ಎಸ್. ಮತ್ತಿತರರು ಪಾಲ್ಗೊಂಡರು.
ಕೀರ್ತನಾರಾಧನೆಯ ಉದ್ಘಾಟನಾ ಸಂಗೀತ ಸೇವೆಯು ಶ್ರೀಮತಿ ಸರಸ್ವತಿ ಕೃಷ್ಣನ್ ಮತ್ತು ಬಳಗದವರಿಂದ ಪ್ರಾರಂಭಗೊಂಡು ಕೆರೆಮನೆ ಶ್ರೀ ಮನಮೋಹನ ಮತ್ತು ಬಳಗದವರಿಂದ ಕೊಳಲು ವಾದನ, ಶ್ರೀ ಬಳ್ಳಪದವು ಯೋಗೀಶ್ ಶರ್ಮರ ಶಿಷ್ಯರಿಂದ, ವಿದುಷಿ ಶ್ರೀಮತಿ ಉಷಾ ಈಶ್ವರ್ ಭಟ್ ಇವರ ಸಂಗೀತ ಸೇವೆಯ ಬಳಿಕ ಚೆನೈ ಶ್ರೀ ಗಣೇಶ್ ಕೃಷ್ಣನ್ ಮತ್ತು ಕಲ್ಮಾಡಿ ಎಸ್. ಪೂರ್ಣಪ್ರಜ್ಞರವರಿಂದ ದ್ವಂದ್ವ ಪಿಟೀಲು ವಾದನ ಸೇವೆ ನಡೆಯಿತು. ಭೋಜನ ವಿರಾಮದ ಬಳಿಕ ವಿದ್ವಾನ್ ಪ್ರಭಾಕರ ಕುಂಜಾರ್ ಇವರ ಶಿಷ್ಯರಿಂದ ವಯೊಲಿನ್ ವಾದನ ಬಳಿಕ ಹಾಡುಗಾರಿಕೆಯಲ್ಲಿ ಡಾ. ಹೇಮಶ್ರೀ ಕುಮಾರಿ ಶ್ರೀ ವಾಣಿ, ವಿದುಷಿ ಶ್ರೀಮತಿ ರಾಧಾ ಮುರಳೀಧರ ಭಾಗವಹಿಸಿದರು. ಬಳಿಕ ಕಲ್ಮಾಡಿ ಪೂರ್ಣಪ್ರಜ್ಞ ಇವರಿಂದ ಕರ್ನಾಟಿಕ್ ಗಿಟ್ಟಾರ್ ಸೋಲೋ ನಡೆದ ನಂತರ ಕಲಾ ಮಂದಿರದ ವಿದ್ಯಾರ್ಥಿಗಳಿಂದ ಸಂಗೀತ ಸೇವೆ, ಶ್ರೀ ಎಂ.ವಿ. ರಾಜ್ ಕುಮಾರ್ ಇವರಿಂದ ಕರ್ನಾಟಿಕ್ ಗಿಟ್ಟಾರ್ ವಾದನ, ದಿನದ ಪ್ರಧಾನ ಕಾರ್ಯಕ್ರಮವಾಗಿ ನಡೆದ ಶ್ರೀ ಪಿ.ವಿ. ಅಜೆಯ ನಂಬೂದಿರಿ ಚೆನ್ನೈ ಯವರ ಹಾಡುಗಾರಿಕೆಯ ಕಛೇರಿಗೆ ವಯೊಲಿನ್ ನಲ್ಲಿ ಪಾಲಕ್ಕಾಡ್ ಆರ್. ಸ್ವಾಮಿನಾಥನ್, ಮೃದಂಗದಲ್ಲಿ ಪಾಲ್ಘಾಟ್ ಮಹೇಶ್ ಕುಮಾರ್ ಸಹಕರಿಸಿದರು.
ದಿನಾಂಕ 11 -02-2024ರಂದು ಬೆಳಗ್ಗೆ 9 ಗಂಟೆಗೆ ದೀಪ ಪ್ರಜ್ವಲನ ಕಾರ್ಯವನ್ನು ಮೃದಂಗ ವಿದ್ವಾನ್ ಪಿ. ಪುರುಷೋತ್ತಮ ಪುಣಿಂಚಿತ್ತಾಯ ಮತ್ತಿತರರು ನೆರವೇರಿಸಿದರು. ಕಾಞಂಗಾಡ್ ಶ್ರೀ ಟಿ.ಪಿ. ಶ್ರೀನಿವಾಸನ್ ಇವರ ನೇತೃತ್ವದಲ್ಲಿ ವಿದುಷಿ ಶ್ರೀಮತಿ ಉಷಾ ಈಶ್ವರ್ ಭಟ್, ಸಂಗೀತ ಕಲಾ ಮಂದಿರದ ಅಧ್ಯಾಪಕ ವಿದ್ಯಾರ್ಥಿಗಳಿಂದ ಮತ್ತು ಊರ ಪರವೂರ ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೀರ್ತನಾರಾಧನೆ ನಡೆಯಿತು. ಈ ಸತ್ಕಾರ್ಯದಲ್ಲಿ ಹಲವು ವಯೊಲಿನ್, ಮೃದಂಗ, ಕೊಳಲು ವಾದಕರು ಭಾಗವಹಿಸಿ ಸಹಕರಿಸಿದರು. ಬಳಿಕ ಶ್ರೀ ವಿಶ್ವಾಸ್ ಕೃಷ್ಣ ಮಂಗಳೂರು ಮತ್ತು ಕುಮಾರಿ ಶ್ರೇಷ್ಠಾಲಕ್ಷ್ಮೀಯವರ ದ್ವಂದ್ವ ವಯೊಲಿನ್ ವಾದನ ಸೇವೆ ನಡೆಯಿತು. ಬಳಿಕ ವಿದ್ವಾನ್ ಟಿ.ಪಿ. ಶ್ರೀನಿವಾಸನ್, ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ಹಾಗೂ ಕಲಾ ಮಂದಿರದ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು. ಭೋಜನ ವಿರಾಮದ ಬಳಿಕ ಶ್ರೀಮತಿ ಸವಿತಾ ಎಂ. ಮತ್ತು ಕಲಾ ಮಂದಿರದ ಅಧ್ಯಾಪಕ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆ ನಡೆಯಿತು. ಎರಡು ದಿನಗಳ ಸಂಗೀತ ಸೇವೆಯಲ್ಲಿ ವಯೊಲಿನ್ ವಾದಕರಾಗಿ ವಿದ್ವಾನ್ ಶ್ರೀ ವೇಣು ಗೋಪಾಲ್ ಶ್ಯಾನುಬೋಗ್, ವಿದ್ವಾನ್ ಶ್ರೀ ಪ್ರಭಾಕರ್ ಕುಂಜಾರ್, ವಿದುಷಿ ಕುಮಾರಿ ಧನಶ್ರೀ ಶಬರಾಯ, ಶ್ರೀಮತಿ ನಯನ ಶಂಕರ್ ಕಲ್ಮಾಡಿ ಪೂರ್ಣಪ್ರಜ್ಞ ಸಹಕರಿಸಿದರೆ ಮೃದಂಗದಲ್ಲಿ ವಿದ್ವಾನ್ ಶ್ರೀ ಪಿ. ಪುರುಷೋತ್ತಮ ಪುಣಿಂಚಿತ್ತಾಯ, ಡಾ. ಶಂಕರ್ ರಾಜ್, ಶ್ರೀ ಬಡಕ್ಕೇಕೆರೆ ಶ್ರೀಧರ್ ಭಟ್, ಶ್ರೀ ವಾಸುದೇವ ಕಾಞಂಗಾಡು, ಶ್ರೀ ಶ್ರೀಜಿತ್ ಕಾಞಂಗಾಡು, ಕೊಳಲಿನಲ್ಲಿ ಕೆರೆಮನೆ ಮನ ಮೋಹನ, ಕೆರೆಮನೆ ಗುರು ಕಿರಣ್ ಭಾಗವಹಿಸಿದರು.
ಸಂಜೆ 3.40 ವಂದನಾ ಸದಸ್ ಕಾರ್ಯಕ್ರಮ ನಡೆಯಿತು. ಈ ವೇದಿಕೆಗೆ ಆಗಮಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಶತಾಯುಷಿ ವಿದ್ವಾನ್ ಕೆ. ಬಾಬು ರೈ, ವಯೊಲಿನ್ ವಿದ್ವಾನ್ ಚೆನ್ನೈ ರಾಮಮೂರ್ತಿ ಇವರೆಲ್ಲರನ್ನು ಸ್ವಾಗತಿಸಿ ಇವರ ಉಪಸ್ಥಿತಿಯಲ್ಲಿ ತುಂಬಿದ ಸಂಗೀತಾರಾಧಕರ ಸಮಕ್ಷಮದಲ್ಲಿ ಸಂಗೀತ ಸಾಧಕ ಶ್ರೀ ಶ್ರೀಜಿತ್ ಕಾಞಂಗಾಡ್ ಮತ್ತು ಧಾರ್ಮಿಕ ಸಾಂಸ್ಕೃತಿಕ ಮುಂದಾಳು ಶ್ರೀ ಕೆ.ಎನ್. ವೆಂಕಟ್ರಮಣ ಹೊಳ್ಳ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಶ್ರೀಮತಿ ಪುಷ್ಪಲತಾ ಟೀಚರ್ ಮತ್ತು ಶ್ರೀ ವಾರಿಜಾಕ್ಷನ್ ವಾಚಿಸಿದರು. ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಎಲ್ಲರನ್ನೂ ಆಶೀರ್ವದಿಸಿ ಹರಸಿದರು. ಹಾಗೇ ಉಳಿಯ ತಂತ್ರಿವರ್ಯ ವಿಷ್ಣು ಅಸ್ರರು ಆಶೀರ್ವದಿಸಿ ಶುಭಾಶಂಸೆಗೈದರು. ಸಂಗೀತ ಕಲಾ ಮಂದಿರದ ಗುರುವರ್ಯರಾದ ಸದಾಶಿವ ಆಚಾರ್ಯರು ಎಲ್ಲರಿಗೂ ಧನ್ಯವಾದಗೈದರು.
ದಿನದ ಪ್ರದಾನ ಕಾರ್ಯಕ್ರಮ 5 ಗಂಟೆಗೆ ಪ್ರಾರಂಭವಾಯಿತು. ಹಾಡುಗಾರಿಕೆಯಲ್ಲಿ ಚೆನ್ನೈಯ ಶ್ರೀ ಟಿ.ಎಂ. ಕೃಷ್ಣನ್, ಶ್ರೀ ವಿಠಲ್ ರಾಮಮೂರ್ತಿ ವಯೊಲಿನ್, ಶ್ರೀ ಪ್ರವೀಣ್ ಸ್ಪರ್ಶಿ ಮೃದಂಗ, ಶ್ರೀ ಚಂದ್ರಶೇಖರ ಶರ್ಮ ಘಟಂ ಹಾಗೂ ಶ್ರೀ ಪೂರ್ಣಪ್ರಜ್ಞ ಕಲ್ಮಾಡಿ ತಂಬೂರದಲ್ಲಿ ಸಹಕರಿಸಿದರು.
ಮೊದಲಿಗೆ ಸಾವೇರಿ ರಾಗ ಆದಿ ತಾಳದ ‘ರಾಮ ಬಾಣ ತ್ರಾಣ’ ಎಂಬ ತ್ಯಾಗ ರಾಜ ಕೀರ್ತನೆ ಹಾಡಿ ಮತ್ತೆ ಮೋಹನ ಕಲ್ಯಾಣಿ ರಾಗ ಆದಿತಾಳದ ಮುತ್ತಯ್ಯ ಭಾಗವತರ ‘ಭುವನೇಶ್ವರಿಯಾ’ ಕೀರ್ತನೆ ಹಾಡಿದರು. ಶಂಕರಾಭರಣ ರಾಗ ವಿಸ್ತರಿಸಿ ನೇರ ಪುರಂದರ ದಾಸರ ತ್ರಿಪ್ರಟ ತಾಳದ ‘ಪೋಗದಿರೆಲೋ ರಂಗ’ ಕೀರ್ತನೆಯನ್ನು ಹಾಡಿದರು. ಆಮೇಲೆ ಕಾಪಿ ರಾಗವನ್ನು ವಿಠಲ್ ರಾಮ್ ಮೂರ್ತಿಯವರು ವಿಸ್ತಾರವಾಗಿ ನುಡಿಸಿದರು. ‘ಇಂತ ಸೌಖ್ಯ’ ಆದಿತಾಳದ ಕೀರ್ತನೆಯನ್ನು ಮುಂದುವರಿಸುತ್ತಾ ಜಗದೋದ್ಧಾರನ’ ಪುರಂದರ ದಾಸರ ಕೀರ್ತನೆ ಹಾಡಿ ನೆರವಲ್ ಮಾಡಿ ವಿಸ್ತಾರವಾಗಿ ಸ್ವರ ಪ್ರಸಾದ ಮಾಡಿ ತನಿ ಆವರ್ತನಕ್ಕೆ ಬಿಟ್ಟರು. ಏನು ಲಯ ವಿನ್ಯಾಸವೋ, ಏನು ಲೆಕ್ಕಾಚಾರವೋ, ಏನು ನಾದ ಮಾಧುರ್ಯವೋ, ಏನು ಕೈ ಚಳಕವೋ ಎಂಬಂತೆ ಕಲಾವಿದರು ಮೃದಂಗ, ಘಟಂ ನುಡಿಸಿ ಸಂಗೀತ ಪ್ರೇಮಿಗಳನ್ನು ದಿಗ್ಭ್ರಾಂತರನ್ನಾಗಿಸಿದರು. ಮುಂದೆ ಗೌಡ ಮಲ್ಹಾರ್ ರಾಗ ರೂಪಕ ತಾಳದಲ್ಲಿ ಮುತ್ತಯ್ಯ ಭಾಗವತರ ‘ಸಾರಸ ಮುಖಿ ಸಕಲ ಭಾಗ್ಯದೇ’, ದೇಶ್ ರಾಗ ಆದಿ ತಾಳದಲ್ಲಿ ‘ವಿಠಲಾ ಸಲಹೋ ಸ್ವಾಮಿ’ ಹಮೀರ್ ಕಲ್ಯಾಣಿ ರಾಗದಲ್ಲಿ ಮುತ್ತಯ್ಯ ಭಾಗವತರ ಆದಿತಾಳದ ತಿಲ್ಲಾನ ಹಾಡಿ ಕೊನೆಯಲ್ಲಿ ಸೌರಾಷ್ಟ್ರ ರಾಗ ಆದಿತಾಳದ ತ್ಯಾಗ ರಾಜರ ‘ನೀ ನಾಮ ರೂಪ ಮೂಲಕ’ ಮಂಗಳ ಹಾಡಿನ ಸಂಪೂರ್ಣ ಆಚರಣೆಗಳನ್ನು ವಿಳಂಬವಾಗಿ ಹಾಡಿ ಮುಗಿಸಿದಾಗ ಪ್ರೇಕ್ಷಕರ ಕಣ್ಣಿನಲ್ಲಿ ಆನಂದ ಭಾಷ್ಪ ತುಂಬಿತ್ತು.
ಅಮೋಘ, ಸುಶ್ರಾವ್ಯ ವಿದ್ವತ್ ಪೂರ್ಣ ಸುಮಧುರ ಸಂಗೀತ ಕಾರ್ಯಕ್ರಮ ಕಿಕ್ಕಿರಿದ ಸಂಗೀತಾಸಕ್ತ ಪ್ರೇಕ್ಷಕರನ್ನು ದಿಗ್ಭ್ರಾಂತರನ್ನಾಗಿಸಿತು. ದೀರ್ಘ ಕರತಾಡನದಿಂದ ಪ್ರಶಂಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗುರುಗಳಾದ ಕಲ್ಮಾಡಿ ಸದಾಶಿವ ಆಚಾರ್ಯರು ಎಲ್ಲರಿಗೂ ಧನ್ಯವಾದವಿತ್ತರು. ಬಳಿಕ ಶ್ರೀ ವಿಠಲ್ ರಾಮಮೂರ್ತಿ ಮತ್ತು ಟಿ.ಎಂ. ಕೃಷ್ಣರವರ ಶಿಷ್ಯ ಈಗಾಗಲೇ ಸಂಸ್ಕೃತ ಎಂ.ಎ. ಸಂಗೀತ ವಯೊಲಿನ್ ಎಂ.ಎ. ಯಲ್ಲಿ ಚೆನ್ನೈ ಯುನಿವರ್ಸಿಟಿ ಯಲ್ಲಿ ಪ್ರಥಮ ರ್ಯಾಂ ಕ್ ಪಡೆದು ಉತ್ತೀರ್ಣರಾದ ಕಲ್ಮಾಡಿ ಪೂರ್ಣಪ್ರಜ್ಞ ಕೆ.ಎಸ್.ರವರು ಗುರುದ್ವಯರಿಗೆ ಕಾಣಿಕೆಯನ್ನಿತ್ತು ಆಶೀರ್ವಾದ ಬೇಡಿದರು. ಗುರುದ್ವಯರೂ ಪ್ರೀತಿಯ ಶಿಷ್ಯನಿಗೆ ಶಾಲು ಹೊದಿಸಿ ಅನುಗ್ರಹಿಸುತ್ತಿದ್ದಂತೆ ಪ್ರೇಕ್ಷಕರು ಕರತಾಡನದಿಂದ ಸಂತೋಷ ವ್ಯಕ್ತಪಡಿಸಿದರು.