ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಸಮಾರಂಭವನ್ನು ದಿನಾಂಕ 07 ಫೆಬ್ರುವರಿ 2026ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ವಹಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲ ಸಚಿವರಾದ ಡಾ. ಎ. ಸುಬ್ಬಣ್ಣ ರೈ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಪ್ರಕಟಿತ ಕವನ ಸಂಕಲನದ ಬಗ್ಗೆ ಕವಿ ಡಾ. ವಸಂತಕುಮಾರ್ ಪೆರ್ಲ ಹಾಗೂ ಸಂಶೋಧನಾತ್ಮಕ ಕೃತಿಯ ಬಗ್ಗೆ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಇವರು ಅನಿಸಿಕೆಗಳನ್ನಾಡಲಿದ್ದಾರೆ.
ಮುಂಬಯಿಯ ಸುನೀತಾ ಎಂ. ಶೆಟ್ಟಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು, ಕನ್ನಡ ಮತ್ತು ಕೊಂಕಣಿ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್ ರಾಡ್ರಿಗಸ್ ಕಟಪಾಡಿ, ಲೇಖಕಿ ಚಂದ್ರಭಾಗಿ ರೈ ಇವರ ಹೆಸರಿನ ದತ್ತಿನಿಧಿ ಪುಸ್ತಕ ಬಹುಮಾನಕ್ಕೆ ಬಾಗಲಕೋಟೆಯ ಮುರ್ತುಜಾ ಬೇಗಂ ಕೊಡಗಲಿಯವರ ‘ಹಣತೆ ಹಚ್ಚಿ ಬಿಡಿ ಹೆಜ್ಜೆ ಹೆಜ್ಜೆಗೂ’ ಕೃತಿ ಹಾಗೂ ‘ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ’ಗೆ ಲೇಖಕಿ, ಸಂಘಟಕಿ ಸುಖಲಾಕ್ಷಿ ವೈ. ಸುವರ್ಣ ಇವರ ‘ಮುಂಬಯಿ ಮತ್ತು ಮಹಿಳೆ’ ಸಂಶೋಧನಾತ್ಮಕ ಕೃತಿ ಆಯ್ಕೆಯಾಗಿದೆ.

