ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ದತ್ತಿಗಳಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ, ಕುವೆಂಪು ಸಿರಿಗನ್ನಡ ದತ್ತಿ, ನಾಗಡಿಕೆರೆ-ಕಿಟ್ಟಪ್ಪ ಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ, ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಹಾಗೂ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 28 ಮಾರ್ಚ್ 2025ರಂದು ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ಕನ್ನಡ ಭಾಷೆಗೆ ತನ್ನದೇ ಆದ ಪರಂಪರೆ ಮತ್ತು ಇತಿಹಾಸವಿದೆ. ಹಾಗೆ ಕಾಲಕಾಲಕ್ಕೆ ಸಂಕಷ್ಟಗಳೂ ಎದುರಾಗಿವೆ, ಅಂತಹ ಸಂದರ್ಭದಲ್ಲಿ ಕನ್ನಡಪರ ಹೋರಾಟಗಳು ಅದನ್ನು ಗಟ್ಟಿಗೊಳಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿಗಳು ಬೆನ್ನೆಲುಬಿದ್ದ ಹಾಗೆ. ಇದನ್ನು ಸ್ಥಾಪಿಸಿದ ಮಹನೀಯರು ಮತ್ತು ಅವರ ರೂಪಿಸಿದ ಉನ್ನತ ಆಶಯಗಳು ನಾಡು-ನುಡಿಗೆ ದುಡಿದವರನ್ನು ಗುರುತಿಸುವ ಮಹತ್ವದ ಕಾರ್ಯಕ್ಕೆ ನೆರವು ನೀಡುತ್ತಿವೆ. ಇವತ್ತು ಪ್ರದಾನವಾಗುತ್ತಿರುವ ದತ್ತಿ ಪುರಸ್ಕಾರಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮಹಾತ್ಮ ಗಾಂಧೀಜಿಯವರಿಂದಲೇ ‘ರಾಜರ್ಷಿ’ ಎಂಬ ಹೆಗ್ಗಳಿಕೆಯನ್ನು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ದತ್ತಿ ಇದೆ, ಕನ್ನಡ ವಿದ್ವತ್ ಮತ್ತು ಹೋರಾಟವನ್ನು ಒಟ್ಟುಗೂಡಿಸಿ ಕನ್ನಡಪರ ಚಿಂತನೆಗಳನ್ನು ನೆಲದಾಳಕ್ಕಿಳಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನ ದತ್ತಿ ಇದೆ. ಉಳಿದ ದತ್ತಿಗಳೂ ಕೂಡ ತನ್ನದೇ ಆದ ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅತ್ಯಂತ ಪಾರದರ್ಶಕವಾಗಿ ಅರ್ಜಿ-ಮರ್ಜಿಗಳಿಲ್ಲದೆ ನಿಜವಾದ ಸಾಧಕರನ್ನು ಗುರುತಿಸಿ ಪುರಸ್ಕಾರಗಳನ್ನು ನೀಡಲಾಗುತ್ತದೆ. ಈ ಗೌರವ ಕನ್ನಡದ ಕುರಿತು ಪ್ರೀತಿಯನ್ನು ಬೆಳೆಸುವ ಹಾಗೆ ಕನ್ನಡದ ಕುರಿತ ಜಾಗೃತಿ ಮತ್ತು ಕನ್ನಡವನ್ನು ಉಳಿಸುವಲ್ಲಿ ಎಚ್ಚರಿಕೆಯನ್ನೂ ಬೆಳೆಸಬೇಕು” ಎಂದು ಅಭಿಪ್ರಾಯಪಟ್ಟರು.
ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಚನ್ನಪ್ಪ ಕಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಪ್ರಕಟಣೆ, ವಿಚಾರಸಂಕಿರಣ, ಸಾಹಿತ್ಯ ಸಮ್ಮೇಳನ ಮತ್ತು ದತ್ತಿ ಪುರಸ್ಕಾರಗಳು ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ಕು ಸ್ತಂಭಗಳಿದ್ದ ಹಾಗೆ. ಕನ್ನಡದ ಕುರಿತು ಅಪಾರ ಪ್ರೀತಿ ಹೊಂದಿರುವ ಕ್ರಿಯಾಶೀಲ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಈ ನಾಲ್ಕು ಸ್ತಂಭಗಳನ್ನು ಗಟ್ಟಿಗೊಳಿಸಿದೆ” ಎಂದು ಮೆಚ್ಚಿಗೆಯ ಮಾತುಗಳನ್ನಾಡಿದರು.
ದತ್ತಿ ಪ್ರದಾನ ಮಾಡಿದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಆಯುಕ್ತರಾದ ಡಾ. ಎಂ.ವಿ. ವೆಂಕಟೇಶ್ ಅವರು ಮಾತನಾಡಿ “ಇದೊಂದು ಮಹತ್ವದ ಕಾರ್ಯಕ್ರಮ, ಇದರ ಹಿಂದಿನ ಆಶಯಗಳು ಮಹತ್ವದ್ದಾಗಿವೆ. ಭಾಷೆಯ ಸಂರಕ್ಷಣೆಗೆ ಇಂತಹ ಕಾರ್ಯಕ್ರಮಗಳು ನೆರವು ನೀಡಲಿವೆ, ಭಾಷೆಯನ್ನು ಉತ್ತಂಗಕ್ಕೆ ತೆಗೆದುಕೊಂಡು ಹೋಗಲು ಅಗತ್ಯ ಪ್ರಯತ್ನಗಳಾಗಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಾಹಿತಿ ಅಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆಯವರು ಮಾತನಾಡಿ “ಪತ್ರಿಕೋದ್ಯಮ ಮತ್ತು ಮಾಹಿತಿ ಹಕ್ಕು ಎರಡೂ ಇಂದು ಕವಲುದಾರಿಯಲ್ಲಿವೆ. ಇದು ಆತ್ಮಾವಲೋಕನ ಕಾಲ” ಎಂದು ಹೇಳಿ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದ ಮೇಲೆ ಮಾಡಿರುವ ಸುಧಾರಣೆಗಳು, ಜಾಗತಿಕ ನೆಲೆಗೆ ತೆಗೆದುಕೊಂಡು ಹೋಗಲು ಮಾಡುತ್ತಿರುವ ಪ್ರಯತ್ನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
2024ನೆಯ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪುರಸ್ಕಾರವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಗೆ ನೀಡಲಾಗಿದ್ದು, ಸಂಸ್ಥೆಯ ಪರವಾಗಿ ಎಂ.ಜಿ. ಬಾಲಕೃಷ್ಣ ಪ್ರಶಸ್ತಿಯನ್ನು ಸ್ವೀಕರಿಸಿದರು, 2024ನೆಯ ಸಾಲಿನ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಹಿರಿಯ ಕನ್ನಡಪರ ಹೋರಾಟಗಾರ ಪ್ರವೀಣ ಶೆಟ್ಟಿಯವರು, ನಾಗಡಿಕೆರೆ-ಕಿಟ್ಟಪ್ಪ ರುಕ್ಮಿಣಿ ದತ್ತಿ ಪ್ರಶಸ್ತಿಯನ್ನು 2025ನೆಯ ಸಾಲಿಗೆ ಹಿರಿಯ ಪರ್ತಕರ್ತ ರವೀಂದ್ರ ಭಟ್ಟ ಅವರು, ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ಪ್ರಶಸ್ತಿಯನ್ನು 2025ನೆಯ ಸಾಲಿಗೆ ಸಾ.ತಿ. ಸದಾನಂದ ಗೌಡ ಅವರು. 2023-24ನೆಯ ಸಾಲಿನ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿಯನ್ನು ಸಾಕಮ್ಮ ಪಡೆಸಲಹಟ್ಟಿ ಮತ್ತು ಬಾನಂದೂರು ಬೋರಮ್ಮ ಇವರುಗಳು ಸ್ವೀಕರಿಸಿದರು. ದತ್ತಿ ಪುರಸ್ಕೃತರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ನೆರೆದಿದ್ದರು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಅವರು ನಿರೂಪಿಸಿ, ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಸ್ವಾಗತಿಸಿದರು.