ಮಂಗಳೂರು : ನಾಡಿನ ಬೇರೆ ಬೇರೆ ಲೇಖಕ-ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ ಜಾನಪದ ಕತೆಗಳ ಸಂಕಲನ ‘ಚನ್ನನ’ದ ಇಂಗ್ಲೀಷ್ ಅನುವಾದಿತ ‘ದಿ ಫಕೀರ್ಸ್ ಡಾಟರ್ ಆ್ಯಂಡ್ ಅದಾರ್ ಬ್ಯಾರಿ ಫೋಕ್ ಟೆಲ್ಸ್’ ಕೃತಿಯನ್ನು ನಗರದ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಅಡ್ಮಿನ್ ಬ್ಲಾಕ್‌ನ ಸಭಾಂಗಣದಲ್ಲಿ ದಿನಾಂಕ 21 ಮೇ 2025ರಂದು ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿದ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಉಪಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮಾತನಾಡಿ “ಭಾಷೆ ಮತ್ತು ಸಾಂಸ್ಕ್ರತಿಕ ಅಧ್ಯಯನ ನಿಕಾಯವು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಸಂಸ್ಕೃತಿ ನೆಲೆನಿಲ್ಲಲು ಇಂತಹ ವೌಲಿಕ ಕೃತಿಗಳ ಪ್ರಕಟನೆಯ ಅಗತ್ಯವೂ ಇದೆ. ಇವುಗಳನ್ನು ಓದುವ ಮೂಲಕ ಸಂಸ್ಕೃತಿ – ಬದುಕಿನ ಬಗ್ಗೆ ಅರಿಯಲು ಸಾಧ್ಯವಿದೆ” ಎಂದರು.
ಕೃತಿಯ ಸಂಪಾದಕ, ಪತ್ರಕರ್ತ ಹಂಝ ಮಲಾರ್ ಮಾತನಾಡಿ “ಬ್ಯಾರಿ ಕ್ಷೇತ್ರಕ್ಕೆ ಸಂಬಂಧಿಸಿ ಈವರೆಗೆ ಬ್ಯಾರಿ, ಕನ್ನಡ, ಇಂಗ್ಲೀಷ್‌ನಲ್ಲಿ 125 ಕೃತಿಗಳು ಪ್ರಕಟಗೊಂಡಿವೆ. ಆದರೆ ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿ ಇದೇ ಮೊದಲ ಬಾರಿಗೆ ಇಂಗ್ಲೀಷ್‌ಗೆ ಅನುವಾದಗೊಂಡಿದೆ. ಅದಕ್ಕಾಗಿ ಅನುವಾದಕಿ ಡಾ. ಸಿಲ್ವಿಯಾ ರೇಗೋ ಅಭಿನಂದನಾರ್ಹರು” ಎಂದರು.
ವೇದಿಕೆಯಲ್ಲಿ ಹಿರಿಯ ಸಂಶೋಧಕ ರೆ.ಡಾ. ವಿಲ್ಲಿ ಡಿಸಿಲ್ವ, ಕೃತಿಯ ಅನುವಾದಕಿ, ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕಿ ಡಾ. ಸಿಲ್ವಿಯಾ ರೇಗೋ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳನ್ನು ಡಾ. ಝೀಟ ಲೋಬೊ ಪರಿಚಯಿಸಿದರು. ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ರೊ. ಫ್ಲೋರಾ ಕ್ಯಾಸ್ಟಲಿನೊ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಜೊಕ್ಕಿಂ ಪಿಂಟೊ ವಂದಿಸಿ, ರೇಡಿಯೋ ಸಾರಂಗ್‌ನ ಕಾರ್ಯಕ್ರಮ ನಿರ್ವಾಹಕ ಸೈಫ್ ಕುತ್ತಾರ್ ಸಹಕರಿಸಿದರು. ಪ್ರಾಧ್ಯಾಪಕ ಸ್ಯಾಮುವೆಲ್ ಪೀಟರ್ಸ್ ಕಾರ್ಯಕ್ರಮ ನಿರೂಪಿಸಿದರು.