ಮಂಗಳೂರು : ಪಣಂಬೂರಿನ ಪಿ.ವಿ. ಐತಾಳ ಇವರ ಇಂಗ್ಲೀಷ್ ಯಕ್ಷಗಾನ ಬಳಗ ‘ಯಕ್ಷನಂದನ’ ಇದರ 43ನೇ ವರ್ಷಾಚರಣೆಯ ಪ್ರಯುಕ್ತ ಇಂಗ್ಲೀಷ್ ಯಕ್ಷಗಾನ ಪ್ರದರ್ಶನವು ದಿನಾಂಕ 02-07-2024ರಂದು ಸಂಜೆ ಗಂಟೆ 5-30ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಯಕ್ಷಗಾನ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಇವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸುರತ್ಕಲ್ ಎನ್‌ಐಟಿಕೆ ಸ್ಪೂಡೆಂಟ್ ವೆಲ್ ಫೇರ್ ಡೀನ್ ಪ್ರೊ. ಎ. ಚಿತ್ತರಂಜನ್ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಮುಖ್ಯಸ್ಥೆ ಶ್ರೀ ರಾಜಮಣಿ ಎ. ಇವರು ಅತಿಥಿಯಾಗಿ ಭಾಗವಹಿಸುವರು. ಪಿ.ವಿ. ಐತಾಳ ಅವರ ಸ್ಮರಣಾರ್ಥ ಶ್ರೀ ಪಿ.ವಿ. ಐತಾಳ ಮೆಮೋರಿಯಲ್ ವೆಂಕಟರತ್ನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ ವಿದ್ಯಾನಿಧಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಹಾಗೂ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಅನಘ ಐತಾಳ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಪಿ. ಸಂತೋಷ್ ಐತಾಳ ವಿರಚಿತ ‘ಸೀತಾಪಹಾರ’ ಮತ್ತು ‘ಜಟಾಯು ಮೋಕ್ಷ’ ಇಂಗ್ಲೀಷ್ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಕೀಲರಾಗಿದ್ದ ಪಿ.ವಿ. ಐತಾಳ ಅವರು 1981ರಲ್ಲಿ ಯಕ್ಷನಂದನ ಸಂಸ್ಥೆ ಸ್ಥಾಪಿಸಿ ಇಂಗ್ಲೀಷ್ ಯಕ್ಷಗಾನ ಪ್ರದರ್ಶನ ಆರಂಭಿಸಿದ್ದರು. ಇದೀಗ ಸಂಸ್ಥೆ ನಾಲ್ಕು ದಶಕಗಳನ್ನು ಪೂರೈಸಿದ್ದು, ಪಿ.ವಿ. ಐತಾಳರು ನಿಧನ ಹೊಂದಿದ ಬಳಿಕ ಅವರ ಮಕ್ಕಳು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.