ಬಂಟ್ವಾಳ : ಏರ್ಯ ಆಳ್ವ ಫೌಂಡೇಶನ್ ಇದರ ವತಿಯಿಂದ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಸಮಾರಂಭವು ದಿನಾಂಕ 28 ಆಗಸ್ಟ್ 2025ರಂದು ಬಂಟ್ವಾಳದ ಅಮ್ಟಾಡಿಯ ‘ಏರ್ಯ ಬೀಡುವಿನಲ್ಲಿ’ ನಡೆಯಿತು. ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಪತ್ನಿ ಆನಂದಿ ಎಲ್. ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು.
ಡಾ. ನಾ. ದಾಮೋದರ ಶೆಟ್ಟಿ ಇವರ ಸಂಪಾದಿತ ‘ಏರ್ಯ ಸಾಹಿತ್ಯ ಮರುಚಿಂತನ’ ಕೃತಿಯನ್ನು ಅನಾವರಣಗೊಳಿಸಿದ ಜಾನಪದ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ್ ರೈ ಮಾತನಾಡುತ್ತಾ “ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಆಳ್ವರ ಬರೆದದ್ದು ಕಡಿಮೆ, ಓದಿದ್ದು ಹೆಚ್ಚು. ಅವರು ಭಾವನಾತ್ಮಕ ಜೀವಿ, ಕವಿ ಹೃದಯಿ. ಅವರ ಬಗ್ಗೆ ಬರೆದಿರುವ ಪುಸ್ತಕದ ತೋರಣ ಹಾಗೂ ಹೂರಣ ಅದ್ಭುತವಾಗಿದೆ” ಎಂದು ಹೇಳಿದರು.
ಹಿರಿಯ ಸಾಹಿತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಹಾಗೂ ಡಾ. ನಾ. ದಾಮೋದರ ಶೆಟ್ಟಿಯವರಿಗೆ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಏರ್ಯ ಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮರ್ ಟೀಕೆ ಸ್ವಾಗತಿಸಿ, ಆರ್. ನರಸಿಂಹ ಮೂರ್ತಿ ವಂದಿಸಿದರು. ಮೈಮ್ ರಾಮ್ ದಾಸ್ ಮತ್ತು ತಂಡದವರು ಗಾಯನ ಪ್ರಸ್ತುತ ಪಡಿಸಿದರು. ಮಹಾಬಲೇಶ್ಬರ ಹೆಬ್ಬಾರ್ ಮತ್ತು ಕೇಶವ ಎಚ್. ಕಾರ್ಯಕ್ರಮ ನಿರೂಪಿಸಿದರು.