ಕುಶಾಲನಗರ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ದಿನಾಂಕ 02-08-2024ರಂದು ಪ್ರಬಂಧ ಸ್ಪರ್ಧೆ ಮತ್ತು ದೇಶ ಭಕ್ತಿ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಶಾಲನಗರದ ಜೂನಿಯರ್ ಕಾಲೇಜು ದೈಹಿಕ ಶಿಕ್ಷಕ ಡಾ. ಸದಾಶಿವ ಪಲ್ಯದ ಇವರು ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ಮೂಲವಾಗಿರುವ ಜಾನಪದ ಸಾಹಿತ್ಯ ಇತ್ತೀಚಿಗೆ ಮರೆಯಾಗುತ್ತಿರುವುದು ಬೇಸರದ ವಿಚಾರ. 1911ರಲ್ಲಿ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಂಘ ಎನ್ನುವ ಹೆಸರಿನಲ್ಲಿ ಸ್ಥಾಪನೆಯಾಗಿತ್ತು. ಆಗಲೇ ಸಾಹಿತ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭವಾಯಿತು. ಅನಂತರ ಮೈಸೂರು ಸಂಸ್ಥಾನದಿಂದ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿದ್ದು. ಈಗ ಕುಶಾಲನಗರ ತಾಲೂಕು ಘಟಕ ಸಾಹಿತ್ಯ ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರವಾಗುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕ ಎ.ಸಿ. ಮಂಜುನಾಥ್ ಮಾತನಾಡಿ, “ಸ್ಪರ್ಧೆಗಳಲ್ಲಿ ಒಬ್ಬರು ಸೋತಾಗ ಮಾತ್ರ ಮತ್ತೊಬ್ಬರು ಗೆಲ್ಲಲು ಸಾಧ್ಯವಾಗುತ್ತದೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದವರು ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ” ಎಂದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, “ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆ ಅನಾವರಣ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು. ಸಾಹಿತ್ಯ ಪರಿಷತ್ತು ಕಾರ್ಯದರ್ಶಿಗಳಾದ ಎಸ್. ನಾಗರಾಜ್, ಟಿ.ವಿ. ಶೈಲಾ, ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೆಶಕರಾದ ಬಿ.ಬಿ. ಹೇಮಾಲತಾ, ಡಿ.ಆರ್. ಸೋಮಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.