ವಿಶಾಖಪಟ್ಟಣ : ವಿಶಾಖಪಟ್ಟಣದ ಪ್ರತಿಮಾ ಟ್ರಸ್ಟ್ ಆಯೋಜಿಸಿದ ಶಾಸ್ತ್ರೀಯ ಸಂಗೀತವನ್ನು ಕುರಿತ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಕನ್ನಡತಿ ಕುಮಾರಿ ಭವ್ಯ ಭಟ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. ‘Hindustani Music and Carnatic Music – A Comparative Study’ ಎಂಬ ದೀರ್ಘ ಪ್ರಬಂಧಕ್ಕೆ ಈ ಬಹುಮಾನವು ದೊರೆತಿದೆ. ಈ ಬಹುಮಾನವು ರೂ.25,000/- ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.
ದ್ವಿತೀಯ ಬಹುಮಾನ ಪಡೆದ ಕುಮಾರಿ ತ್ರಿಪುರನೇನಿ ಕೃತಿ ಶರ್ಮ ಗುಂಟೂರಿನವರು. ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ ಗುಂಟೂರಿನಲ್ಲಿ ತಮ್ಮದೇ ಆದ ‘ಸಂಗೀತ ಸರಿತ’ ಎಂಬ ಸಂಗೀತ ಶಾಲೆ ನಡೆಸುತ್ತಿದ್ದಾರೆ. ಈ ಬಹುಮಾನವು ರೂ.15,000/- ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ.
ತೃತೀಯ ಬಹುಮಾನ ಗಳಿಸಿದ ಡಾ. ಅಂಜನಾ ಶ್ರೀನಿವಾಸಲು ತೆಲುಗು ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿದ್ದು, ಚಿತ್ತೂರಿನ ಕಾಲೇಜೊಂದರಲ್ಲಿ ತೆಲುಗು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಹುಮಾನ ರೂ.10,000/- ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು, ದಿನಾಂಕ 15-11-2023ರಂದು ವಿಶಾಖಪಟ್ಟಣದಲ್ಲಿ ಬಹುಮಾನ ವಿತರಣೆಯ ಸಮಾರಂಭವು ಜರಗಲಿದೆ.