ಯುರೋಪ್ : ವಿದುಷಿ ರಾಧಿಕಾ ಶೆಟ್ಟಿಯವರು ಭರತನಾಟ್ಯದ ‘ಆರಂಭಿಕ ಅಭಿನಯ ಕಾರ್ಯಾಗಾರ’ವನ್ನು ದಿನಾಂಕ 08-11-2023ರಿಂದ 19-11-2023ರವರೆಗೆ ಯುರೋಪಿನ ವಿವಿಧೆಡೆಗಳಲ್ಲಿ ನಡೆಸಿಕೊಡಲಿದ್ದಾರೆ.
ಸನಾತನ ನಾಟ್ಯಾಲಯದ ಹೆಸರಾಂತ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಅವರ ಗರಡಿಯಲ್ಲಿ ಆರಂಭಿಕ ಹೆಜ್ಜೆಗಳನ್ನು ಹಾಕಲಾರಂಭಿಸಿದ ರಾಧಿಕಾ, ಇಂದು ದೇಶದ ಉದ್ದಗಲಕ್ಕೂ ತಮ್ಮ ಪ್ರೌಢ ಪ್ರದರ್ಶನದ ಮೂಲಕ ಗುರುತಿಸಿಕೊಂಡಿರುವ ಮಂಗಳೂರಿನ ಏಕವ್ಯಕ್ತಿ ಶಾಸ್ತ್ರೀಯ ಭರತನಾಟ್ಯ ಕಲಾವಿದೆ.
ನೃತ್ಯದ ಆಳ ಮತ್ತು ವಿಸ್ತಾರವನ್ನು ಹುಡುಕುತ್ತ ಇವರು ಆಕರ್ಷಿತರಾದದ್ದು ಪ್ರಸಿದ್ಧ ನೃತ್ಯಗಾತಿ ಪದ್ಮಿನಿ ರಾಮಚಂದ್ರನ್ ಅವರ ಕಡೆಗೆ. ಪದ್ಮಿನಿ ಅವರ ಮಾರ್ಗದರ್ಶನದಲ್ಲಿಯೇ ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡಿದ ರಾಧಿಕಾ, ಮತ್ತಷ್ಟು ಅಭಿನಯ ಪ್ರೌಢಿಮೆ ಸಾಧಿಸುವಂತಾಗಲು ಕಾರಣರಾದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪೊತ್ತಿದ ಕಲಾವಿದೆ ಭ್ರಗಾ ಬಸೆಲ್. ಅಭಿನಯ ಕಲಿಸುವಂಥದ್ದಲ್ಲ, ಅದು ಕಲಾವಿದರಿಗೆ ಆಂತರಂಗಿಕ ಎಂಬುದು ರಾಧಿಕಾ ಅವರ ವಿಷಯದಲ್ಲಿಯೂ ಸತ್ಯ. ನೃತ್ಯದಲ್ಲಿ ಹಾವಭಾವಾಭಿನಯವೇ ಇವರ ಸಾಮರ್ಥ್ಯ. ಅವರ ಮಾತನ್ನೇ ಉಲ್ಲೇಖಿಸಿ ಹೇಳುವುದಾದರೆ, ಅವರೊಬ್ಬ ಸಮರ್ಥ ನೃತ್ಯಪಟುವಲ್ಲ. ನಾಟ್ಯವೇನಿದ್ದರೂ ಅವರಿಗೆ ಅಂತರಂಗವನ್ನು ಪ್ರೇಕ್ಷಕರ ಮುಂದಿಡುವ ಮಾಧ್ಯಮವಷ್ಟೇ. ಇವರ ನಾಟ್ಯ ನರ್ತನ ಪ್ರಧಾನವಲ್ಲ. ಅಭಿನಯವೇ ಜೀವಾಳ.
ನಿಟ್ಟೆ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದ ರಾಧಿಕಾ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 6 ವರ್ಷ ನೌಕರಿಯಲ್ಲಿದ್ದವರು.
ಭಾರತದ ಮಣ್ಣಿನ ಕಲೆ, ನೆಲಕ್ಕೆ ಅಂಟಿಕೊಳ್ಳುವ ಅದಮ್ಯ ಆಸೆ ಅಮೆರಿಕದಲ್ಲಿ ನೆಲೆಸಿದ್ದ ಇವರನ್ನು ಮತ್ತೆ ಭಾರತಕ್ಕೆ ಬರುವಂತೆ ಮಾಡಿತು. ಇನ್ನಷ್ಟು ಕಲಿಯಲು ಬಾಕಿ ಇದೆ ಎಂಬುದನ್ನು ಬಹಳ ಬೇಗ ಗುರುತಿಸಿಕೊಂಡ ರಾಧಿಕಾ ಅವರಿಗೆ ಗುರುವಾಗಿ ಒಲಿದದ್ದು ದೇಶ, ವಿದೇಶಗಳಲ್ಲಿ ಖ್ಯಾತ ನಾಮರಾಗಿರುವ ರಮಾ ವೈದ್ಯನಾಥನ್. ದೆಹಲಿಯಲ್ಲಿ ನೆಲೆಸಿರುವ ರಮಾ ಅವರ ಬಳಿಗೆ ತೆರಳಿ, ಅವರಿಂದ ನಾಟ್ಯವನ್ನು ತಿದ್ದಿಸಿಕೊಳ್ಳುತ್ತಲೇ ಇದ್ದ ರಾಧಿಕಾ, ಅವರೀಗ ಸ್ವಂತ ನೃತ್ಯ ನಿರ್ದೇಶನದತ್ತ ಹೆಚ್ಚು ಉತ್ಸುಕತೆ ತೋರುತ್ತಿರುವ ಏಕವ್ಯಕ್ತಿ ಕಲಾವಿದೆ. ಮಂಗಳೂರಿನಲ್ಲಿ ನೆಲೆಸಿರುವ ಪತಿ ಹರೀಶ್ ಶೆಟ್ಟಿ ಐಟಿ ಉದ್ಯೋಗಿ. ಪತ್ನಿಯ ಕಲಾಸಕ್ತಿ, ಕಲಾಶಕ್ತಿಗೆ ಬೆನ್ನೆಲುಬು.
ರಾಧಿಕಾ ಮುನ್ನಡೆಸುವ ನೃತ್ಯಾಂಗನ್ ಎಂಬ ಹೆಸರಿನ ಟ್ರಸ್ಟ್, ಮುಂದಿನ ಜನಾಂಗದ ಏಕವ್ಯಕ್ತಿ ಕಲಾವಿದರನ್ನು ತಯಾರು ಮಾಡುವ ಕಡೆಗೆ ದೃಷ್ಟಿ ನೆಟ್ಟಿದೆ.
ಏಕವ್ಯಕ್ತಿ ಪ್ರದರ್ಶನ ನೀಡಬಲ್ಲ ಕಲಾವಿದರು ಭರತನಾಟ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತಯಾರಾಗಬೇಕು ಎನ್ನುವ ಹಂಬಲ ರಾಧಿಕಾ ಅವರದು. ಜತೆಗೆ, ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ ಮಹೋನ್ನತ ಕಲಾವಿದರನ್ನು ಮಂಗಳೂರಿಗೆ ಕರೆಸಿ, ಅವರ ಪ್ರದರ್ಶನ ಆಯೋಜಿಸುವುದು, ನೃತ್ಯ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಹೀಗೆ ಇಲ್ಲಿನ ನೃತ್ಯಾಸಕ್ತ ಪ್ರೇಕ್ಷಕರು, ನೃತ್ಯಾಭ್ಯಾಸಿಗಳು ಗುಣಮಟ್ಟದ ಏಕವ್ಯಕ್ತಿ ಪ್ರದರ್ಶನಗಳನ್ನು ನೋಡುವಂತೆ ಮಾಡುವುದು ಈ ಟ್ರಸ್ಟಿನ ಉದ್ದೇಶ. ಶಾಸ್ತ್ರೀಯ ನೃತ್ಯಕ್ಕೆ ಯುವ ತಲೆಮಾರಿನ ಪ್ರೇಕ್ಷಕರಿಲ್ಲ ಎಂಬುದು ಎಲ್ಲೆಲ್ಲಿಯೂ ಕೇಳಿಬರುತ್ತಿರುವ ಕೂಗು. ಈ ಕೊರತೆಯನ್ನು ನಿವಾರಿಸಬೇಕಿದ್ದರೆ, ಎಳೆ ಮನಸ್ಸುಗಳನ್ನು ನೃತ್ಯದ ಕಡೆಗೆ ಆಕರ್ಷಿಸಿ, ಅವರಲ್ಲಿ ಅಭಿರುಚಿ ಮೂಡಿಸಬೇಕು ಎಂಬ ಯೋಚನೆ ರಾಧಿಕಾ ಅವರದು. ಈ ದಿಸೆಯಲ್ಲಿ ಕರಾವಳಿ ಜಿಲ್ಲೆಯುದ್ದಕ್ಕೂ ಶಾಲೆಗಳಲ್ಲಿ ಜ್ಞಾನವಾಹಿನಿ ಎಂಬ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಇವರು ನಡೆಸುತ್ತಿದ್ದಾರೆ.