ಉಡುಪಿ : ಸಮಕಾಲೀನ ಕಲೆಯನ್ನು ಜನ ಸಾಮಾನ್ಯರೊಂದಿಗೆ ಬೆಸೆಯುವ ಪ್ರಯತ್ನದ ಶಿಕಾಗೋ ಅಂತರರಾಷ್ಟ್ರೀಯ ಟೆರ್ರೈನ್ ಬಿನಾಲೆಯು ದಿನಾಂಕ 01 ಅಕ್ಟೋಬರ್ 2025ರಿಂದ 15 ನವೆಂಬರ್ 2025ರ ತನಕ ವಿಶ್ವದಾದ್ಯಂತ ನಡೆಯುತ್ತಿದ್ದು, ಉಡುಪಿಯ ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆಯವರ ‘ಯಕ್ಷ’ ಕಲಾಕೃತಿಯು ಇದೇ ಸಂದರ್ಭದಲ್ಲಿ ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಅಮೇರಿಕಾ, ಡೆನ್ಮಾರ್ಕ್, ಜರ್ಮನಿ, ಗ್ರೀಸ್, ಇಟೆಲಿ ಮೊದಲಾದ ವಿಶ್ವದ ಸುಮಾರು 60ಕ್ಕೂ ಮಿಕ್ಕಿದ ಕಡೆಗಳಲ್ಲಿ 80ಕ್ಕೂ ಮಿಕ್ಕಿ ಸಮಕಾಲೀನ ಕಲಾಕೃತಿಗಳು ಇದರ ಭಾಗವಾಗಿ ಪ್ರದರ್ಶನಗೊಳ್ಳುತ್ತಿದ್ದು ಭಾರತದ ಹತ್ತು ಕಡೆಗಳಲ್ಲಿನ ಕಲಾಕೃತಿಗಳು ಈ ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಭಾರತದ ಕಲಾಪ್ರದರ್ಶನದ ಸಂಯೋಜಕಿ ಭಾಗ್ಯ ಅಜಯ್ ಕುಮಾರ್ ತಿಳಿಸಿದ್ದಾರೆ.
ಹಾವಂಜೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಯಕ್ಷ’ ಮಿಶ್ರ ಮಾಧ್ಯಮದ ಕಲಾಕೃತಿಯು ಗ್ರಾಮೀಣ ಬದುಕನ್ನು ದರ್ಶಿಸುವ ಯಕ್ಷ ಕಲಾವಿದನೋರ್ವನ ಬದುಕನ್ನು ಸೆರೆಹಿಡಿದು ಪ್ರದರ್ಶನಗೊಳ್ಳುತ್ತಿದೆ. ನಿಜ ಜೀವನದ ಯಕ್ಷನನ್ನು ಬಿಂಬಿಸಿದ ಈ ಕಲಾಕೃತಿಯು ಕಾವಿ ಕಲೆಯ ಸಾಂಪ್ರದಾಯಿಕ ಸೊಗಡನ್ನು ದುಡಿಸಿಕೊಂಡು, ಗದ್ದೆಯ ಮಣ್ಣಿನ ಜೊತೆಗೆ ಕೆಮ್ಮಣ್ಣು, ಸುಣ್ಣ ಮಾತ್ರವಲ್ಲದೇ ಛಾಯಾಚಿತ್ರಗಳನ್ನೂ ಬಳಸಿಕೊಂಡುದು ಅದಕ್ಕೊಂದು ಸಮಕಾಲೀನ ಚೌಕಟ್ಟನ್ನು ನಿರ್ಮಿಸಿದೆ. ಹಳ್ಳಿಗರ ದೈನಂದಿನ ದಾಖಲಿಸಲ್ಪಡದ ಅಂಶಗಳನ್ನು ಮತ್ತು ಯಕ್ಷರಂಗದಲ್ಲಿ ಮಿಂಚುವ ವಿಜೃಂಭಣೆಯನ್ನು ಈ ಕಲಾಕೃತಿಯು ದರ್ಶಿಸುತ್ತ ವೀಕ್ಷಕರ ಮನಸೂರೆಗೊಳ್ಳುತ್ತಿದೆ.
ವೆಬ್ ಸೈಟ್ ಲಿಂಕ್ : https://terrainexhibitions.org/tb25-karnakata-india
ಜನಾರ್ದನ ಹಾವಂಜೆ : 9845650544