ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆಯಲ್ಲಿ ಇರುವ ಪರಿಷತ್ತಿನ ಕೃಷ್ಣರಾಜ ಮಂದಿರದಲ್ಲಿ ಹಮ್ಮಿಕೊಂಡ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 03-12-2023ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಎಲ್ಲ ಧರ್ಮಗಳ ಗುರಿಯೂ ಒಂದೇ. ಕೃಷ್ಣ-ಕ್ರೈಸ್ತರ ವಿಚಾರಗಳಲ್ಲಿ ವ್ಯತಾಸಗಳಿಲ್ಲ. ಅದರಂತೆ ಸಾಹಿತ್ಯಕ್ಕೂ ಯಾವುದೇ ಗಡಿ ಎನ್ನುವುದಿಲ್ಲ. ಕನ್ನಡ ಭಾಷೆಗೆ ಕ್ರೈಸ್ತ ಧರ್ಮದ ಕೊಡುಗೆ ಅಪಾರ. ಕನ್ನಡಕ್ಕೆ ನಿಘಂಟು ಸೇರಿದಂತೆ ಅನೇಕ ಐತಿಹಾಸಿಕ ಕೊಡುಗೆಯನ್ನು ನೀಡುವ ಮೂಲಕ ಭಾಷೆಗೆ ಧರ್ಮ ಅಡ್ಡಿಯಲ್ಲ ಎನ್ನುವುದು ಸ್ಪಷ್ಟ. ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಿಕ, ಸಾಂಸ್ಕೃತಿಕ, ಬಳಗದಲ್ಲಿ ‘ಚಸರಾ’ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ, ಕನ್ನಡಿಗರಿಗೆ ದೊರೆಯಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡಪರ ಕಾಳಜಿ ಮತ್ತು ಜನಪರ ಕಾಳಜಿಯಿಂದ ಚಸರಾ ಪ್ರಗತಿಪರ ಹೋರಾಟಗಾರರಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡುವುದರ ಜೊತೆಗೆ ಕನ್ನಡ ಸಾಹಿತ್ಯ ಕಲೆಗಳ ಬೆಳವಣಿಗೆಗೆ ಶ್ರಮಿಸಿದ್ದನ್ನು ನಾಡೋಜ ಡಾ. ಮಹೇಶ ಜೋಶಿ ಅವರು ನೆನಪಿಸಿಕೊಂಡರು.
ಸಾಮಾಜಿಕ ಹೋರಾಟಗಾರ್ತಿ ಡಾ. ರುತ್ ಮನೋರಮಾ ಅವರು ಮಾತನಾಡಿ “ಸಾಹಿತ್ಯಕ್ಕೆ ಭಾಷಿಕರನ್ನು ಒಂದು ಮಾಡುವ ಶಕ್ತಿ ಇದೆ. ಪ್ರೀತಿ, ಶಾಂತಿ ಹಾಗೂ ನ್ಯಾಯ ಇದು ಸಮಾಜ ಸುಧಾರಣೆಯ ಹಿಂದೆ ಇರಬೇಕಾದ ವಸ್ತುವಾಗಬೇಕು. ಸಮಾಜದ ಅಭಿವೃದ್ಧಿಯ ಜವಾಬ್ದಾರಿ ಹೊತ್ತವರು ಯಾವುದೇ ವಿವಾದ ಹುಟ್ಟುಹಾಕುವವರಾಗಬಾರದು. ಇಂದಿನ ದಿನಗಳಲ್ಲಿ ಓದುವ ಸಂಸ್ಕೃತಿ ಮತ್ತು ಸೃಜನಶೀಲ ಬರವಣಿಗೆ ಕೂಡ ಕಮ್ಮಿಯಾಗುತ್ತಿದೆ. ವಿಚಾರಗಳು ಮುಂದಿನ ಪೀಳಿಗೆಗೆ ಹೋಗಲು ಇದು ಅತ್ಯಗತ್ಯ. ಆದ್ದರಿಂದ ಬರೆಯವವರ ಬೆನ್ನುತಟ್ಟುವ ಕೆಲಸ ಆಗಬೇಕಿದೆ” ಎಂದು ಹೇಳಿದರು.
ಖ್ಯಾತ ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ಸಾಹಿತಿ, ಸಾಮಾಜಿಕ ಹೋರಾಟಗಾರ್ತಿ ಡಾ. ದು. ಸರಸ್ವತಿ ಅವರಿಗೆ 2023ನೇ ಸಾಲಿನ ‘ಪಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಮಾತನಾಡಿ “ನಾಡೋಜ ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊಸ ದಿಕ್ಕಿನತ್ತ ಸಾಗುತ್ತಿದೆ. ಇವರ ಕೆಲಸ ಕಾರ್ಯಗಳು ಹಾಗೂ ಪರಿಷತ್ತಿನ ಅಭಿವೃದ್ಧಿ ಎಲ್ಲರಲ್ಲಿ ಸಂತಸವನ್ನು ತಂದಿದೆ. ಎಲ್ಲಾ ಬರಹಗಾರರಲ್ಲಿ ಹೋರಟಗಾರ ಅಡಗಿಕೊಂಡು ಇರುತ್ತಾನೆ. ಜಾತಿ, ಧರ್ಮ, ಪದ್ಧತಿಯ ಬಗ್ಗೆ ಗಮನಕೊಡುವ ಬದಲು ಭಾಷೆ ಸಂಸ್ಕೃತಿಯ ಬಗ್ಗೆ ನಾವೆಲ್ಲಾ ಕಾಳಜಿವಹಿಬೇಕಿದೆ. ಯಾವುದೇ ಕ್ಷೇತ್ರದಲ್ಲಿ ಇದ್ದರೂ ಸರಿ ಸತ್ವಯುತ ಸಾಹಿತ್ಯ ರಚಿಸುವ ಮೂಲಕ ನಮ್ಮಲ್ಲಿಯ ಅನೇಕರು ಭಾಷೆಯನ್ನು ಉಳಿಸಿ ಬೆಳೆಸಿದ್ದಾರೆ. ಅದನ್ನು ನಾವೆಲ್ಲರೂ ರಕ್ಷಿಸಿಕೊಂಡು ಮುಂದುವರಿಸಬೇಕಾಗಿದೆ” ಎಂದು ಹೇಳಿದರು.
ಸಂಚಲನಾ ಬಳಗದ ಶ್ರೀಮತಿ ರೀಟಾರೀನಿ ಅವರು ಮಾತನಾಡಿ “ಕನ್ನಡ ಕ್ರೈಸ್ತರ ಹೋರಾಟ ಮಾರ್ಗ ಸಂಕೀರ್ಣವಾಗಿದ್ದು. ಒಂದು ಮುಖ ಮಾತ್ರ ಸಮಾಜಕ್ಕೆ ಗೊತ್ತಿದೆ. ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಅವರ ನಿರಂತರ ಶ್ರಮದ ಕುರಿತು ಅಧ್ಯಯನವಾಗಬೇಕು. ಆಗ ಮಾತ್ರ ಭಾಷೆ ಭಾಷೆಯ ಮಧ್ಯ ಮಧುರ ಸಮನ್ವಯ ಭಾವ ಕಂಡುಬರುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ನಾ. ಡಿಸೋಜಾ ಅವರು ಮಾತನಾಡಿ “ಭಾಷೆಯನ್ನು ಪ್ರೀತಿಸುವ ಮೂಲಕ ಭಾಷೆಯನ್ನು ಬೆಳೆಸಬೇಕು. ಭಾಷೆ ಬಳಸುವುದರಿಂದ ನಮ್ಮ ಬದುಕನ್ನು ನಾವು ಕಟ್ಟಿಕಟ್ಟಿಕೊಳ್ಳುತ್ತಿದ್ದೇವೆ ಎನ್ನುವುದು ಮೂಲಭೂತ ಸತ್ಯ. ಆಡಳಿತ ರಂಗ ಭಾಷೆ ಮತ್ತು ಅದರ ಮೂಲಕ ರೂಪುಗೊಂಡ ಸಾಹಿತ್ಯವನ್ನು ಗೌರವಿಸಬೇಕು. ಇಂತಹ ಜಾಗೃತಿಯನ್ನು ಉಂಟು ಮಾಡುವುದು ನಮ್ಮಂತಹ ಬರಹಗಾರರ ಕರ್ತವ್ಯ. ಇಂದಲ್ಲ ನಾಳೆ ನಮ್ಮ ಕನ್ನಡದ ಮಹತ್ವ, ಭಾಷೆಯ ಹಿರಿಮೆ ತಿಳಿಯುವ ಕಾಲ ಬಂದೇ
ಬರುತ್ತದೆ. ನಮ್ಮ ಕನ್ನಡ ಎನ್ನುವುದು ಶ್ರೀಮಂತ ಭಾಷೆ. ಈ ಭಾಷೆಯೇ ನಮ್ಮಬದುಕು ನಮ್ಮ ಬದುಕು ಗಟ್ಟಿಯಾಗಬೇಕು ಎಂದರೆ ಭಾಷೆ ಭದ್ರವಾಗಿರಬೇಕು” ಎಂದರು.
ಪ್ರಶಸ್ತಿ ಸ್ವೀಕರಿಸಿದ ಇನ್ನೋರ್ವ ಸಾಹಿತಿ ಹಾಗೂ ಹೋರಟಗಾರ್ತಿ ಡಾ. ದು. ಸರಸ್ವತಿ ಅವರು ಮಾತನಾಡಿ “ಪ್ರಶಸ್ತಿಗಳು ಸಾಧಕರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ವಂಚಿತರ ಪರವಾಗಿ ಹೋರಾಟ ಮಾಡದವರು ಸಮಾಜೋದ್ಧಾರದ ಸೋಗುಹಾಕಬಾರದು. ಧರ್ಮ ಮತ್ತು ಭಾಷೆ ಆಯಾಭಾಗದ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಇರುತ್ತದೆ. ಪ್ರಕೃತಿಯೊಂದಿಗೆ ಭಾಷೆ, ಸಂಸ್ಕೃತಿ ನಮ್ಮತನ ಬೆರೆತುಕೊಂಡಿರುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾವಿಕ ಸಂಸ್ಥೆಯ ಅಧ್ಯಕ್ಷ ಶ್ರೀ ಶಿವಕುಮಾರ ಸಾಂದರ್ಭಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿ ವಂದಿಸಿ, ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್.ಎಸ್.ಶ್ರೀಧರ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಡಾ. ಪದ್ಮಿನಿ ನಾಗರಾಜು ನಿರೂಪಿಸಿದರು.