ಮಂಗಳೂರು : ಖ್ಯಾತ ಕಲಾವಿದ, ಶೇವಗೂರ್ ಫೈನ್ ಆರ್ಟ್ಸ್ ಖ್ಯಾತಿಯ ರಾಮದಾಸ್ ಕಾಮತ್ ಶೇವಗೂರ್ ದಿನಾಂಕ 15 ಜನವರಿ 2025 ರಂದು ನಿಧನರಾದರು ಇವರಿಗೆ 78 ವರ್ಷ ವಯಸ್ಸಾಗಿತ್ತು. ಇವರ ಪತ್ನಿ ಕೊಂಕಣಿ ಕಿರು ಕಥೆಗಳ ಹೆಸರಾಂತ ಲೇಖಕಿ ಸಂಧ್ಯಾ ಶೇವಗೂರ್ 2011ರಲ್ಲಿ ನಿಧನ ಹೊಂದಿದ್ದರು.
ಮಂಗಳೂರಿನ ಪ್ರಸಿದ್ದ ಶೇವಗೂರ್ ಕಲಾವಿದರ ಕುಟುಂಬದ ರಾಮದಾಸ್ ಅಗ್ರಗಣ್ಯ ಗ್ರಾಫಿಕ್ ಡಿಸೈನರ್ ಮತ್ತು ಭಾವಚಿತ್ರ ಕಲಾವಿದ ಎಲ್. ಕೆ. ಶೇವಗೂರ್ ಅವರ ಪುತ್ರರಾಗಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಜೆ. ಜೆ. ಸ್ಕೂಲ್ ಆಫ್ ಆರ್ಟ್‌ನಲ್ಲಿ ಕಲಾ ಶಿಕ್ಷಣವನ್ನು ಪಡೆದ ಇವರು ತಂದೆಯ ನಿಧನಾನಂತರ ಶೇವಗೂರ್ ಫೈನ್ ಆರ್ಟ್ಸ್ ನಲ್ಲಿ ತಂದೆಯ ಪರಂಪರೆಯನ್ನು ಮುಂದುವರಿಸಿದರು.
ಭಾವಚಿತ್ರ ರಚನೆಯಲ್ಲಿ, ಅದರಲ್ಲೂ ವಿಶೇಷವಾಗಿ ತೈಲವರ್ಣ ಚಿತ್ರದಲ್ಲಿ ರಾಮದಾಸ್ ಪ್ರಾವೀಣ್ಯ ಹೊಂದಿದ್ದರು. ಕರಾವಳಿಯಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಗೋಡೆಗಳನ್ನು ಇವರ ಜೀವ ಸದೃಶ ಭಾವಚಿತ್ರಗಳು ಅಲಂಕರಿಸಿವೆ. ವಿಶ್ವ ಕೊಂಕಣಿ ಕೇಂದ್ರದ ಹಾಲ್ ಆಫ್ ಫೇಮ್‌ನಲ್ಲಿ ಕಾಣಸಿಗುವ ಅನೇಕ ಗಣ್ಯವ್ಯಕ್ತಿಗಳ ಭಾವಚಿತ್ರಗಳು ಇವರ ಕುಂಚದಿಂದ ಮೂಡಿದವುಗಳಾಗಿವೆ. ಐದು ದಶಕಗಳಲ್ಲಿ ವ್ಯಾಪಿಸಿರುವ ಇವರ ಸಮೃದ್ಧ ವೃತ್ತಿ ಜೀವನದ ಉದ್ದಕ್ಕೂ ಇವರು ಸಾವಿರಾರು ಭಾವಚಿತ್ರಗಳನ್ನು ಚಿತ್ರಿಸಿದ್ದರು. ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು-ಸತ್ವ ಮತ್ತು ಆತ್ಮವನ್ನು-ನಿಖರವಾಗಿ ಸೆರೆ ಹಿಡಿಯುವಲ್ಲಿ ಹೆಸರುವಾಸಿಯಾಗಿದ್ದರು. ಇವರು ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಚಿತ್ರಕಲಾಭಿಮಾನಿಗಳನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.