ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ, ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಇವರ ಮಾತಾ-ಪಿತೃಗಳ ನೆನಪಿನಲ್ಲಿ ಕೊಡ ಮಾಡುವ 2026ನೇ ಸಾಲಿನ ‘ವನಜ-ಸುಜನಾ ರಂಗಮನೆ ಪ್ರಶಸ್ತಿ’ಗೆ ಶ್ರೀ ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯಗಾರ ಮಹೇಶ ಮಣಿಯಾಣಿಯವರನ್ನು ಆಯ್ಕೆ ಮಾಡಲಾಗಿದೆ.
ಸುಳ್ಯ ತಾಲೂಕಿನ ದೊಡ್ಡ ತೋಟದವರಾದ ಮಹೇಶ ಮಣಿಯಾಣಿ ಅವರು ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಉಬರಡ್ಕ ಉಮೇಶ್ ಶೆಟ್ಟಿಯವರಿಂದ ಹೆಜ್ಜೆಗಾರಿಕೆ ಕಲಿತು ಮೇಳ ಸೇರಿದವರು. ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರ ಮಾರ್ಗದರ್ಶನದಲ್ಲಿ ಕಟೀಲು ಮೇಳ ಸೇರಿದ ಅವರು, ಆರಂಭದಲ್ಲಿ ಬಪ್ಪನಾಡು ಮೇಳ, ನಂತರ ಧರ್ಮಸ್ಥಳ ಮೇಳಗಳಲ್ಲಿ ಸ್ತ್ರೀವೇಷ, ಪುಂಡುವೇಷ ನಂತರ ಪೂರ್ಣಪ್ರಮಾಣದ ಹಾಸ್ಯಗಾರರಾಗಿ ಒಟ್ಟು 37 ವರ್ಷ ಯಕ್ಷ ಸೇವೆ ಮಾಡಿದವರು. ಮಳೆಗಾಲದ ತಿರುಗಾಟದಲ್ಲಿ ಏಳು ವರ್ಷದಿಂದ ಮಹಿಳಾ ಕಲಾವಿದೆ ವಿದ್ಯಾ ಕೋಳ್ಳೂರು ಮತ್ತು ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ತಂಡದೊಂದಿಗೆ ಅಮೇರಿಕಾ. ಯುರೋಪ್ ಯಕ್ಷ ಪ್ರವಾಸದ ಖಾಯಂ ಕಲಾವಿದರಾಗಿದ್ದಾರೆ. ವಿಶಿಷ್ಟ ಬಣ್ಣಗಾರಿಕೆ, ಆಂಗಿಕ ಚಲನೆ, ನಿಖರ ಹೆಜ್ಜೆಗಾರಿಕೆ, ವೇಷಭೂಷಣ, ಸ್ಪಷ್ಟ ಮಾತುಗಾರಿಕೆಯಿಂದ ಪುರಾಣದ ಎಲ್ಲ ಪಾತ್ರಗಳಿಗೆ ಜೀವ ತುಂಬುವ ಅಪರೂಪದ ಕಲಾವಿದರೆನಿಸಿಕೊಂಡಿದ್ದಾರೆ. ಯಕ್ಷಗಾನದ ಪರಂಪರೆಯ ಚೌಕಟ್ಟು ಮೀರದ, ಚೌಕಿಯ ಶಿಸ್ತಿಗೆ ಬದ್ಧರಾದ ಮಹೇಶ್ ಮಣಿಯಾಣಿ ರಾಜ್ಯಾದ್ಯಂತ ತನ್ನದೇ ಆದ ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 25 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಪ್ರಶಸ್ತಿಯು ಸನ್ಮಾನ ಪತ್ರ, ರೇಷ್ಮೆ ಶಾಲು, ಫಲಕ, ರೂ.15,555/- ನಗದನ್ನೂ ಹೊಂದಿದೆ. ದಿನಾಂಕ 14 ಮತ್ತು 15 ಫೆಬ್ರುವರಿ 2026ರಂದು ರಂಗಮನೆಯಲ್ಲಿ ನಡೆಯುವ ರಂಗಸಂಭ್ರಮ-2026 ಸಾಂಸ್ಕೃತಿಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಮನೆ ಅಧ್ಯಕ್ಷರಾದ ಡಾ. ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

