ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನೆಲೆಸಿದ್ದ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ, ಕೆಳದಿ ಸಂಸ್ಥಾನ ಸೇರಿದಂತೆ ಹಲವಾರು ವಿಷಯಗಳಲ್ಲಿ ನಿಖರವಾಗಿ ಮಾತನಾಡುತ್ತಿದ್ದ ಕೆಳದಿ ಗುಂಡಾ ಜೋಯಿಸರು ದಿನಾಂಕ 02-06-2024ರಂದು ನಿಧನರಾಗಿದ್ದಾರೆ. ಪ್ರಖ್ಯಾತ ವಿದ್ವಾಂಸರೂ, ಸಂಶೋಧಕರೂ ಆಗಿ ಮಹತ್ವದ ಸಾಧನೆ ಮಾಡಿ ಹೆಸರಾಗಿದ್ದ, ಕೆಳದಿ ಸಂಸ್ಥಾನದ ಬಗ್ಗೆ ವಿಶಿಷ್ಟ ಸಂಶೋಧನೆ ನಡೆಸಿ ಜಗತ್ತಿನ ಗಮನ ಸೆಳೆದಿದ್ದ ಕೆಳದಿ ಗುಂಡಾ ಜೋಯಿಸರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತೀವ್ರ ಸಂತಾಪಗಳನ್ನು ಸೂಚಿಸಿದ್ದಾರೆ. ಹಿರಿಯ ಸಂಶೋಧಕರು ಮತ್ತು ಕೆಳದಿ ಇತಿಹಾಸ – ಹಸ್ತಪ್ರತಿ ವಿದ್ವಾಂಸರೂ ಆಗಿದ್ದ ಅವರು ತಮ್ಮ 60ನೇ ವಯಸ್ಸಿನಲ್ಲಿ ಎಂ.ಎ., ಪಿಎಚ್.ಡಿ. ಮಾಡಿ ಕೆಳದಿ ಸಂಸ್ಥಾನದ ಇತಿಹಾಸವನ್ನು ಆಮೂಲಾಗ್ರ ಅಧ್ಯಯನ ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾಳೆಗರಿ ಸಂಗ್ರಹ ಮತ್ತು ಅಧ್ಯಯನ ನಡೆಯಲು ಅವರ ಕೊಡುಗೆ ಬಹಳ ಮಹತ್ವದ್ದಾಗಿತ್ತು.
ಕೆಳದಿಯಲ್ಲಿ ತಮ್ಮ ಮನೆಯಲ್ಲೇ ಇದ್ದ ಸಂಸ್ಥಾನದ ಪ್ರಾಚೀನ ಹಸ್ತಪ್ರತಿಗಳು ಮತ್ತು ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸಲು ಕೆಳದಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕೊನೆಯವರೆಗೂ ಮುನ್ನಡೆಸುತ್ತಿದ್ದರು. ಸರಕಾರದಿಂದ ಅನುದಾನ ಪಡೆದು, ಕೊನೆಗೆ ಸರಕಾರಕ್ಕೆ ವಸ್ತು ಸಂಗ್ರಹಾಲಯ ಒಪ್ಪಿಸಿ, ಅದನ್ನು ಶಿವಮೊಗ್ಗ ವಿಶ್ವವಿದ್ಯಾಲಯಕ್ಕೆ ನಿಯೋಜನೆ ಮಾಡಿದ್ದರು. ಅದರ ಕ್ಯುರೇಟರ್ ಆಗಿ ಮಗ ವೆಂಕಟೇಶ ಜೋಯಿಸರನ್ನೇ ನೇಮಿಸಿದ್ದರು. ಅವರು ಇತಿಹಾಸ ಸಂಶೋಧಕರಾಗಿ ಹೆಸರು ಮಾಡಿದ್ದು ಈಚೆಗೆ ನಿವೃತ್ತರಾಗಿದ್ದರು. 94ರ ಇಳಿ ವಯಸ್ಸಿನಲ್ಲೂ ತಮ್ಮ ಸಂಶೋಧನಾ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲ. ಇತ್ತೀಚಿನ ಇತಿಹಾಸ ಪತ್ರಿಕೆಗಳಲ್ಲಿಯೂ ಅವರ ಲೇಖನಗಳು ಪ್ರಕಟವಾಗಿದ್ದವು.
ಗುಂಡಾ ಜೋಯಿಸರು ಸಾಗರ ತಾಲ್ಲೂಕಿನ ಕೆಳದಿಯಲ್ಲಿ 1931ರ ಸೆಪ್ಟೆಂಬರ್ 27ರಂದು ಜನಿಸಿದರು. ತಂದೆ ನಂಜುಂಡ ಜೋಯಿಸರು, ತಾಯಿ ಮೂಕಾಂಬಿಕೆ. ಗುಂಡಾ ಜೋಯಿಸರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ನಡೆಯಿತು. ಮುಂದೆ ಬೆಂಗಳೂರಿನ ಕೋಟೆ ಹೈಸ್ಕೂಲು ಸೇರಿದರು. ಮೈಸೂರು ವಿಶ್ವವಿದ್ಯಾಲಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ಬಿ.ಎ. (ಇತಿಹಾಸ) ಪದವಿ, ಕನ್ನಡ ಪಂಡಿತ, ಸಂಸ್ಕೃತ ಪಂಡಿತ, ಹಿಂದಿ ಪ್ರಬೋಧ, ಕನ್ನಡರತ್ನ, ಆಗಮ ವಿದ್ವಾನ್ ಪದವಿ ಮುಂತಾದವುಗಳನ್ನು ಪಡೆದರು. ಗುಂಡಾ ಜೋಯಿಸರು ತಿಗಳಾರಿ, ಸಂಸ್ಕೃತ, ಕನ್ನಡ ಮೋಡಿ ಲಿಪಿಯನ್ನು ಓದುವ ಅತ್ಯಂತ ಪ್ರತಿಭಾನ್ವಿತ ಸಂಶೋಧಕರಾಗಿ ರೂಪುಗೊಂಡರು. ಗುಂಡಾ ಜೋಯಿಸರ ಪೂರ್ವಿಕರು ಆನೆಗೊಂದಿ ನಿವಾಸಿಗಳಾಗಿದ್ದು ವಿಜಯನಗರ ರಾಜ ಪುರೋಹಿತರಾಗಿದ್ದರು. ತಾಯಿ ಕೆಳದಿ ಆಸ್ಥಾನ ಕವಿಗಳ ಮಗಳು. ಹೀಗೆ ಇವರು ಕೆಳದಿ ವಂಶ ವಾಹಿನಿಯಲ್ಲಿ ಹರಿದುಬಂದ ಪುರಾತನ ಇತಿಹಾಸದ ಕೊಂಡಿಯಾಗಿದ್ದರು.
ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಗುಂಡಾ ಜೋಯಿಸರಿಗೆ ಕೆಳದಿಯ ಇತಿಹಾಸವೇ ಉಸಿರಾಯಿತು. 1960ರಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನ ಕೇಂದ್ರ ಪ್ರಾರಂಭಿಸಿದರು. ತಮ್ಮ ಮನೆತನಕ್ಕೆ ಸೇರಿದ ವಿಪುಲವಾದ ಓಲೆಗರಿ, ಶಾಸನ ಮತ್ತು ಪ್ರಾಚೀನ ವಸ್ತುಗಳ ಸಂಗ್ರಹ ಮಾಡಿದರು. ಈ ವಸ್ತು ಸಂಗ್ರಹಾಲಯದಲ್ಲಿ ಎರಡು ಸಾವಿರ ಪ್ರಾಚೀನ ಓಲೆಗರಿಗಳಿದ್ದು ಅವು ಆಯುರ್ವೇದ, ಸಂಗೀತ, ಜ್ಯೋತಿಷ್ಯಕ್ಕೆ ಸಂಬಂಧಿಸಿವೆ ಎಂದು ಹೇಳಲಾಗಿದೆ. 120 ವಿವಿಧ ಚಾರಿತ್ರಿಕ ದಾಖಲೆಗಳು, ಸುಮಾರು ಮೂರು ಸಾವಿರ ವಿವಿಧ ಭಾಷಾ ಗ್ರಂಥಗಳು, ಕೃಷ್ಣದೇವರಾಯನ ಕಾಲದ ದಿನಚರಿಯ ಓಲೆಗಳು, ಸರ್ವಜ್ಞನ ಪೂರ್ವೋತ್ತರದ ತಾಡಓಲೆಗಳು, ಮಹಾಭಾರತದ ಸೂಕ್ಷ್ಮ ವರ್ಣಚಿತ್ರಗಳು, ಬಿಜಾಪುರದ ಆದಿಲ್ ಷಾನ ಚಾರಿತ್ರಿಕ ದಾಖಲೆಗಳು ಮುಂತಾದುವುಗಳ ಆಗರವಾಗಿದೆ. ಈ ಸಂಶೋಧನಾ ಕೇಂದ್ರವು ಕೇಂದ್ರ ಸರಕಾರ, ರಾಜ್ಯ ಸರಕಾರ, ದೆಹಲಿ ಇಂದಿರಾಗಾಂಧೀ ಕಲಾ ಕೇಂದ್ರ, ಲಕ್ನೋ ಪ್ರಾಚ್ಯ ವಸ್ತು ಸಂರಕ್ಷಣಾ ಕೇಂದ್ರ, ನ್ಯಾಷನಲ್ ಮ್ಯೂಸಿಯಂ, ಯುನೆಸ್ಕೊ ಮುಂತಾದುವುಗಳಿಂದ ಮಾನ್ಯತೆ ಪಡೆದಿದೆ. ಫ್ರಾನ್ಸ್, ಆಸ್ಟ್ರೇಲಿಯಾ, ಕೆನಡಾ ಮುಂತಾದ ಕಡೆಗಳಿಂದ ಸಂಶೋಧಕರು ಕೆಳದಿಗೆ ಭೇಟಿ ನೀಡಿದ್ದರು. ಹೀಗೆ ಇದೊಂದು ಏಕವ್ಯಕ್ತಿಯ ಮಹಾನ್ ಸಾಧನೆಯಾಗಿತ್ತು.