ಕೊಯಿಕ್ಕೋಡ್ : ಮಲಯಾಳ ಸಾಹಿತಿ ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಎಂ. ಟಿ. ವಾಸುದೇವನ್ ನಾಯರ್ ಹೃದ ಯಾಘಾತದಿಂದಾಗಿ ತನ್ನ 91ನೇ ವಯಸ್ಸಿನಲ್ಲಿ ದಿನಾಂಕ 25 ಡಿಸೆಂಬರ್ 2024ರ ಬುಧವಾರದಂದು ಇಹವನ್ನು ತ್ಯಜಿಸಿದ್ದಾರೆ.
ಅನಾರೋಗ್ಯದಿಂದಿದ್ದ ಇವರನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಎಂ.ಟಿ’ ಎಂದೇ ಪ್ರಸಿದ್ಧರಾಗಿದ್ದ ಇವರು 09 ಆಗಸ್ಟ್ 1933ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಡಲೂರಿನಲ್ಲಿ ಜನಿಸಿದರು.
9 ಕಾದಂಬರಿ ಹಾಗೂ 19 ಸಣ್ಣ ಕತೆಗಳ ಸಂಕಲನಗಳನ್ನು ರಚಿಸಿದ್ದ ಇವರು 6 ಚಲನಚಿತ್ರಗಳನ್ನು ನಿರ್ದೇಶಿಸಿ, 54 ಚಿತ್ರಗಳಿಗೆ ಚಿತ್ರಕತೆ ಬರೆದಿದ್ದರು. ಏಳು ದಶಕಗಳ ಸಾಹಿತ್ಯಕ ಪಯಣದಲ್ಲಿ ಪ್ರಬಂಧಗಳ ಹಲವು ಸಂಕಲನಗಳನ್ನು ಹಾಗೂ ಸ್ಮರಣ ಸಂಚಿಕೆ ರಚಿಸಿದ್ದರು. ಇವರು ‘ಅರಸುವೀಟ್ಟು’, ‘ಮಂಜು’ ಹಾಗೂ ‘ಕಾಲಮ್’ನಂತಹ ಹಲವು ಮಹಾನ್ ಕೃತಿಗಳನ್ನು ರಚಿಸಿದ್ದರು. ಇವರ ‘ನಾಲುಕೆಟ್ಟು’ (ಪೂರ್ವಿಕರ ಮನೆ) ಕಾದಂಬರಿಯನ್ನು ಮಲಯಾಳ ಸಾಹಿತ್ಯದ ಮೇರು ಕೃತಿ ಎಂದೇ ಪರಿಗಣಿಸಲಾಗುತ್ತದೆ. ಕೆಲ ವರ್ಷಗಳ ಕಾಲ ಇವರು ಮಾತೃಭೂಮಿ ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ಶ್ರೀಯುತರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಿ 1995ರಲ್ಲಿ ಇವರಿಗೆ ‘ಜ್ಞಾನಪೀಠ’ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ವಯಲಾರ್ ಪ್ರಶಸ್ತಿ’, ‘ವಲ್ಲತ್ತೋಳ್ ಪ್ರಶಸ್ತಿ’, ‘ಎಳುತ್ತಚ್ಚನ್ ಪ್ರಶಸ್ತಿ’, ‘ಮಾತೃಭೂಮಿ ಸಾಹಿತ್ಯ ಪ್ರಶಸ್ತಿ’,’ ಒ .ಎನ್. ಸಾಹಿತ್ಯ ಪ್ರಶಸ್ತಿ’, 2005ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರ ‘ಪದ್ಮಭೂಷಣ’ ಹಾಗೂ ಮಲಯಾಳ ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ 2013ರಲ್ಲಿ ಅವರಿಗೆ ‘ಜೆ. ಸಿ. ಡ್ಯಾನಿಯಲ್ ಪ್ರಶಸ್ತಿ’ ಪ್ರದಾನ ಮಾಡಲಾಗಿತ್ತು. ರಾಜ್ಯ ಸರ್ಕಾರ ಸ್ಥಾಪಿಸಿದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಕೇರಳ ಜ್ಯೋತಿ ಪ್ರಶಸ್ತಿ’ಯನ್ನು 2022ರಲ್ಲಿ ಮೊದಲಬಾರಿಗೆ ವಾಸುದೇವನ್ ನಾಯರ್ ಇವರಿಗೆ ನೀಡಲಾಗಿತ್ತು.
ಎಂ.ಟಿ.ವಾಸುದೇವನ್ ನಾಯರ್ ಗೌರವಾರ್ಥ ಕೇರಳ ಸರ್ಕಾರ 26 ಮತ್ತು 27 ಡಿಸೆಂಬರ್ 2024ರಂದು ರಾಜ್ಯದಲ್ಲಿ ಶೋಕಾಚರಣೆ ಘೋಷಿಸಿದೆ.