ಉಡುಪಿ: ರಂಗಭೂಮಿ ಕ್ಷೇತ್ರದ ಖ್ಯಾತ ಗಾಯಕ, ನಟ ಬಿ. ಕೃಷ್ಣ ಕಾರಂತ ಇವರು ದಿನಾಂಕ 12 ಡಿಸೆಂಬರ್ 2024ರ ಗುರುವಾರದಂದು ನಿಧನ ಹೊಂದಿದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ಉಡುಪಿಯ ಎಂ. ಜಿ. ಎಂ. ಕಾಲೇಜಿನ ಪ್ರಾದೇಶಿಕ ಸಂಶೋಧನಾ ಕೇಂದ್ರ (ಆರ್.ಆರ್.ಸಿ.) ಇದರ ನಿವೃತ್ತ ಉದ್ಯೋಗಿಯಾಗಿರುವ ಬಿ. ಕೃಷ್ಣ ಕಾರಂತ್ ಖ್ಯಾತ ಗಾಯಕರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು ಮತ್ತು ಧ್ವನಿ ಸುರುಳಿ ಬಹಳ ಜನಪ್ರಿಯವಾಗಿದ್ದವು. ಇವರು ತಮ್ಮ ನಾಟಕಗಳಿಗೆ ಹಿನ್ನೆಲೆ ಗಾಯನ ನೀಡುತಿದ್ದುದು ಮಾತ್ರವಲ್ಲದೆ ಅನೇಕ ರಂಗಭೂಮಿ ನಿರ್ಮಾಣದ ನಾಟಕಗಳಿಗೂ ಹಿನ್ನೆಲೆ ಗಾಯಕರಾಗಿ ಸಹಕರಿಸಿದ್ದಾರೆ.
ಇತ್ತೀಚೆಗಷ್ಟೇ ಉಡುಪಿಯ ರಂಗಭೂಮಿಯವರು ಸಾಂಸ್ಕೃತಿಕ ಮತ್ತು ರಂಗ ಕಲೆಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಬಿ.ಕೃಷ್ಣ ಕಾರಂತರನ್ನು ಸನ್ಮಾನಿಸಿದ್ದರು . ರಂಗಭೂಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಅವರ ಅಚಲ ಬೆಂಬಲ ಮತ್ತು ಪ್ರೋತ್ಸಾಹವು ಸಮುದಾಯದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದೆ. ಅವರ ಅಗಲಿಕೆಯಿಂದ ಸಂಗೀತ ಮತ್ತು ರಂಗಭೂಮಿಗೆ ಅಪಾರ ನಷ್ಟವುಂಟಾಗಿದೆ. ಬಿ.ಕೃಷ್ಣ ಕಾರಂತರು ಪತ್ನಿ, ಇಬ್ಬರು ಪುತ್ರರು, ಸಂಬಂಧಿಕರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.