ಬೆಂಗಳೂರು : ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ದಿನಾಂಕ 29 ಸೆಪ್ಟೆಂಬರ್ 2025ರ ಸೋಮವಾರದಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಒಕ್ಕಲಿ ಎಂಬ ಹಳ್ಳಿಯಲ್ಲಿ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ ಮತ್ತು ಕಲ್ಪನಾದೇವಿ ದಂಪತಿಗಳ ಸುಪುತ್ರರಾಗಿ 1965 ಜೂನ್ 13ರಂದು ಜನಿಸಿದರು. ನಾಟಕದಲ್ಲಿ ಅತಿಯಾದ ಆಸಕ್ತಿ ಇದ್ದ ಇವರಿಗೆ ಹೆಗ್ಗೋಡಿನ ‘ನೀನಾಸಮ್’ ನಾಟಕ ಸಂಸ್ಥೆಯಿಂದ ಪಡೆದ ಡಿಪ್ಲೋಮಾ ಪದವಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ದೊರೆತ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯು ಇವರ ಆಸಕ್ತಿಯನ್ನು ಕೆರಳಿಸಿ, ಆ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿತು. ರಾಜ್ಯದಾದ್ಯಂತ ಸಂಚರಿಸಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ ಖ್ಯಾತಿ ಇವರದು. ‘ಅಂಧ ಯುಗ’, ‘ಇನ್ಸ್ಪೆಕ್ಟರ್ ಜನರಲ್’, ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’, ‘ಬಾಡಿಗೆ ಮನೆ’, ‘ಪುಷ್ಪ ರಾಣಿ’, ‘ಗಲಿವರನ್ನು ಯಾತ್ರೆ’, ‘ಬೆಪ್ಪು ತಕ್ಕಡಿ ಬೋಳೇಶಂಕರ’, ‘ತುಂಟಮಕ್ಕಳ ತಂಟೆ’, ‘ಕುಂಟಾ ಕುಂಟ ಕುರವತ್ತಿ’ ಇತ್ಯಾದಿ ಸೇರಿದಂತೆ ಒಟ್ಟು ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ರಂಗವರ್ತುಲ’ ಮತ್ತು ‘ಬೇಂದ್ರೆ ರಂಗಾವಳಿ’ಯ ಮೂಲಕ ಬೇಂದ್ರೆಯವರ ಎಲ್ಲ ನಾಟಕಗಳನ್ನು ರಂಗದಲ್ಲಿ ಪ್ರದರ್ಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರೇಡಿಯೋ ಮತ್ತು ದೂರದರ್ಶನಗಳಿಗೂ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು ಮಾತ್ರವಲ್ಲದೆ ‘ಗುರು’ ಸಂಸ್ಥೆಯ ಮುಖಾಂತರ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ಯಶಸ್ವಿ ನಿರ್ದೇಶಕ ಇವರಾಗಿದ್ದಾರೆ. ‘ಆಲ್ ದ ಬೆಸ್ಟ್’, ‘ರಾಶಿ ಚಕ್ರ’, ‘ಸಹಿ ರೀ ಸಹಿ’ ನಗೆ ನಾಟಕಗಳನ್ನು ಪ್ರದರ್ಶಿಸಿ ರಾಜ್ಯದ ಎಲ್ಲಾ ಕಡೆಯಿಂದಲೂ ಪ್ರಶಂಸೆಯನ್ನು ಪಡೆದಿದ್ದಾರೆ. ‘ರಾಶಿಚಕ್ರ’ ಇದೊಂದು ಏಕವ್ಯಕ್ತಿ ಅಭಿನಯದ ನಾಟಕ. ಇದರಲ್ಲಿ ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸಿದ ಹೆಗ್ಗಳಿಕೆ ಇವರದು.
ಧಾರವಾಹಿಗಳ ಸಂಭಾಷಣಾಕಾರರಾಗಿ ಕೆಲಸ ಮಾಡುವುದರೊಂದಿಗೆ ‘ಯದ್ವಾ – ತದ್ವಾ’, ‘ಬಣ್ಣದ ಬುಗುರಿ’, ‘ದಶಾವತಾರ’, ‘ಪರ್ವ’, ‘ತುಂತುರು’ ಧಾರವಾಹಿಗಳಲ್ಲಿ ನಟನೆಯನ್ನು ಮಾಡಿದ್ದಾರೆ. ‘ಅತಿಥಿ’, ‘ಮರ್ಮ’, ‘ಜೂಜಾಟ’, ‘ಸ್ಟೂಡೆಂಟ್’, ‘ಅಮೃತಧಾರೆ’, ‘ರಾಮ ಶಾಮ ಭಾಮ’ ಚಲನಚಿತ್ರಗಳಲ್ಲೂ ಅಭಿನಯಿಸಿದ ಶ್ರೇಷ್ಠ ನಟ ಯಶವಂತ ಸರದೇಶಪಾಂಡೆಯವರು. ‘ಸಹಿ ರೀ ಸಹಿ’, ‘ಕಾಲಚಕ್ರ’, ಐಡಿಯಾ ಮಾಡ್ಯಾರ’ ಎಂಬ ಚಿತ್ರಗಳನ್ನು ನಿರ್ಮಿಸುವುದರೊಂದಿಗೆ ‘ರಾಮ ಶಾಮ ಭಾಮ’ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದ ಖ್ಯಾತಿ ಇವರಿಗೆ ಸಲ್ಲುತ್ತದೆ.
ಉತ್ತಮ ಸಂಭಾಷಣೆಯ ರಚನೆಗಾಗಿ ಸನ್ ಫೀಸ್ಟ್ ಉದಯ ಟಿವಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಯೂರ ಪ್ರಶಸ್ತಿ, ನಗೆ ಸರದಾರ ಪ್ರಶಸ್ತಿ ಮುಂತಾದ ಗೌರವಗಳು ಇವರಿಗೆ ದೊರೆತಿವೆ.
Subscribe to Updates
Get the latest creative news from FooBar about art, design and business.