ವಿದ್ಯಾಗಿರಿ : ಆಳ್ವಾಸ್ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ : 24-06-2023ರಂದು ‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದ ಕಾರ್ಯಕ್ರಮ ನಡೆಯಿತು.
‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದದಲ್ಲಿ ಕಾದಂಬರಿಕಾರ ಶ್ರೀ ಸತೀಶ್ ಚಪ್ಪರಿಕೆ ಮಾತನಾಡಿ “ಮನುಷ್ಯನಿಗೆ ಮನುಷ್ಯನಾಗಿ ಬದುಕಲು ಕಲಿಸದ ಧರ್ಮ ಯಾಕೆ? ಎಂಬುದು ‘ಘಾಂದ್ರುಕ್’ ಕೃತಿಯ ಒಳನೋಟವೂ ಹೌದು’ ಎಂದು ಹೇಳಿದರು.
ಧರ್ಮ ಇಂದು ವ್ಯಾಪಾರಿ ಸರಕಾಗುತ್ತಿದೆ. ಮನುಕುಲದ ಉದ್ಧಾರಕ್ಕಾಗಿ ಬಳಕೆಯಾಗುತ್ತಿಲ್ಲ. ಒಕ್ಕಲೆಬ್ಬಿಸುವುದೂ ಹಿಂಸೆ. ಜಾಗತಿಕ ಮಟ್ಟದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದ ಅವರು ಮುಂದುವರಿದು ಕೃತಿಕಾರನ ಬದುಕು ಆತನ ಬರಹದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಂಬಿತವಾಗಿರುತ್ತದೆ. ‘ಇಲ್ಲ’ ಎನ್ನುವುದಾದದರೆ, ಆತ ಸುಳ್ಳು ಹೇಳುತ್ತಿರಬಹುದು ಅಥವಾ ಬರಹ ಕದ್ದಿರಬಹುದು. ಪುಸ್ತಕದಷ್ಟು ದೊಡ್ಡ ಆಸ್ತಿ ಬೇರೆ ಇಲ್ಲ. ಪುಸ್ತಕ ಓದಿ. ಬರಹ ತೃಪ್ತಿ ನೀಡುತ್ತದೆ. ಬರೆಯಿರಿ, ಓದಿ. ನಿಮ್ಮ ಪರಿಸರ ನಿಮ್ಮ ಜೀವನ ರೂಪಿಸುತ್ತದೆ ಎಂದ ಅವರು, ದಿನ ಪತ್ರಿಕೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ವಿಚಾರಕ್ಕೆ ಆದ್ಯತೆ ಕಡಿಮೆಯಾದ ಕಾರಣ ನಾವು ‘ಬುಕ್ ಬ್ರಹ್ಮ’ ಆರಂಭಿಸಿದೆವು. ಸಾಪ್ಟ್ ವೇರ್ ಕಂಪೆನಿಯನ್ನೂ ನಡೆಸುತ್ತಿದ್ದೇವೆ. ರಸ್ತೆ ಬದಿಯ ಸಣ್ಣ ಚಹಾದ ಅಂಗಡಿ ಮಾಡಬೇಕು ಎಂಬುದು ಭವಿಷ್ಯದ ಕನಸು ಎಂದರು.
ಅನುಭವ, ಓದು, ಜೀವನ ನೋಡುವ ರೀತಿಯೇ ನಿಮ್ಮ ಸೃಜನಶೀಲತೆಯನ್ನು ರೂಪಿಸುತ್ತದೆ. ಕನಸು ದೊಡ್ಡದಾಗಿ ಇರಲಿ. ಸಾಕಷ್ಟು ಅವಕಾಶಗಳಿವೆ. ಅದಕ್ಕೆ ತಕ್ಕಂತೆ ಜ್ಞಾನ ಮತ್ತು ತಂತ್ರಜ್ಞಾನ ವೃದ್ಧಿಸಿಕೊಳ್ಳಿ. ನಾನು ಪತ್ರಕರ್ತನಾಗಿದ್ದೆ. ಹೀಗಾಗಿ, ಡೆಡ್‌ಲೈನ್ ಬಂದಾಗ ಬರೆಯುವುದು ರೂಢಿ. 424 ಪುಟಗಳ ‘ಘಾಂದ್ರುಕ್’ ಲೋಕಾರ್ಪಣೆಯ ದಿನಾಂಕ ಪ್ರಕಟಗೊಂಡ ಬಳಿಕ, 75 ದಿನಗಳಲ್ಲಿ ಕೃತಿ ಪೂರ್ಣಗೊಳಿಸಿದೆ. ನನಗೆ ಕಾರ್ಪೊರೇಟ್ ವಾಸನೆ ಇದ್ದ ಕಾರಣದಿಂದ ‘ಘಾಂದ್ರುಕ್’ ಹೆಸರು ಇಷ್ಟವಾಯಿತು. ಸಾವು, ಕಾಮ, ಬದುಕು ಮತ್ತಿತರ ವಿಷಯವನ್ನು ಮುಕ್ತವಾಗಿ ಹೇಳಲಾಗಿದೆ. ಕನ್ನಡದಲ್ಲಿ ವರ್ಷಕ್ಕೆ 7 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಮಾಧ್ಯಮದಲ್ಲಿ ನಾಟಕೀಯ ಬದಲಾವಣೆಗಳು ಆಗಿವೆ. ಜಗತ್ತು ತೀವ್ರ ಚಲನಶೀಲವಾಗಿದೆ. ಸುದ್ದಿ ಹುಟ್ಟುವ ಬಗೆಯೇ ಬದಲಾಗಿದೆ ಎಂದ ಅವರು, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪತ್ರಕರ್ತರಿಗೆ ಹೆಚ್ಚಿನ ಸ್ವಾತಂತ್ರ್ಯಲ ಹಾಗೂ ಸತ್ಯಕ್ಕೆ ಹೆಚ್ಚು ಅವಕಾಶ ಇದೆ ಎಂದು ವಿಶ್ಲೇಷಿಸಿದರು.
ಕೃತಿ ಪರಿಚಯ ಮಾಡಿದ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಮಾತನಾಡಿ, “ಬದುಕಿನ ಹಪಾಹಪಿಗಳನ್ನೆಲ್ಲ ಕಳೆದುಕೊಂಡು ಸ್ವಚ್ಛ ನದಿಯಂತೆ ಇರುವ ಹಳ್ಳಿ ‘ಘಾಂದ್ರುಕ್’. ಇದುವೇ ಕೃತಿಯ ಹೆಸರು. ಇದು ಹೊಸ ಕಥನ ಮಾದರಿ ಎಂದರು.
ಕಾದಂಬರಿಯಲ್ಲಿ ನಾಲ್ಕು ಭಾಗಗಳಿವೆ. ನಾಯಕ ಸಿದ್ಧಾರ್ಥ್ ನ ಹಳ್ಳಿಯ ಬಾಲ್ಯ, ಕಾರ್ಪೊರೇಟ್ ಜಗತ್ತಿನ ವ್ಯವಹಾರ, ಅಂತರರಾಷ್ಟ್ರೀಯ ರಕ್ತಸಿಕ್ತ ಅಧ್ಯಾಯ, ಕೊನೆಗೆ ಸಿಗಬಹುದಾದ ಸಂತೃಪ್ತಿಗಳಿವೆ” ಎಂದು ವಿವರಿಸಿದರು.
ಇದೊಂದು ಬದುಕಿನ ದೊಡ್ಡ ಶೋಧ. ಮನಕಲುಕುವ ಸಾವು ಮತ್ತು ಕಾಮ ಕಾದಂಬರಿಯಲ್ಲಿ ಕಾಡುವ ತತ್ವಗಳು. ಲೌಕಿಕಕ್ಕಿಂತ ಆಚೆಗೆ ಬದುಕಿದೆ ಎಂಬ ತನ್ಮಯ ಕಥನದಲ್ಲಿದೆ. ಅನುಭಾವದ ಹುಡುಕಾಟ ಇಲ್ಲಿದೆ ಎಂದ ಅವರು, ವೈಭೋಗದ ಜಗತ್ತಿನೊಳಗಿನ ಕ್ರೌರ್ಯವನ್ನು ಚಪ್ಪರಿಕೆ ಈ ಹಿಂದೆ ಪರಿಚಯಿಸಿದ್ದರು ಎಂದರು.
ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಇದ್ದರು. ವಿದ್ಯಾರ್ಥಿನಿ ಕವನಾ ಕಾರ್ಯಕ್ರಮ ನಿರೂಪಿಸಿದರು.