ಮಂಗಳೂರು : ಮಂಗಳೂರಿನ ಕೆನರಾ ಕಾಲೇಜಿನ ಐ.ಕ್ಯೂ.ಎ.ಸಿ. ಮತ್ತು ಗ್ರಂಥಾಲಯ ಮಾಹಿತಿ ಕೇಂದ್ರವು ದಿನಾಂಕ 14 ಆಗಸ್ಟ್ 2025ರಂದು ಏರ್ಪಡಿಸಿದ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ರವರ ನೆನಪು ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ “ಆಧುನಿಕ ತಂತ್ರಜ್ಞಾನವು ಮಾಹಿತಿಗಳ ರಾಶಿಯನ್ನೇ ನಮ್ಮೆದುರು ತಂದಿಡುತ್ತಿವೆ. ಆದರೆ ಅದನ್ನು ಜ್ಞಾನವಾಗಿ ಪರಿವರ್ತಿಸಿ ಬದುಕಿಗೆ ದಾರಿದೀಪ ಮಾಡಬಲ್ಲ ಶಕ್ತಿ ಪುಸ್ತಕಗಳಿಗಿವೆ. ಅಪಾರ ಅನುಭವ ಮತ್ತು ಜ್ಞಾನವನ್ನು ಹೊಂದಿರುವ ಬರಹಗಾರರ ಕೃತಿಗಳನ್ನು ಓದುವುದರ ಮೂಲಕ ಲೋಕಾನುಭವವನ್ನು ಹೊಂದಬಹುದು. ಬಡತನದ ಕುಟುಂಬದಿಂದ ಬಂದ ರಂಗನಾಥನ್ ಅವರು ಗ್ರಂಥಗಳ ಕುರಿತು ಅಪಾರ ಪ್ರೀತಿಯುಳ್ಳವರಾಗಿದ್ದರು. ಆರಂಭದಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕೆಲ ಕಾಲ ಅಧ್ಯಾಪಕರಾಗಿದ್ದ ಅವರು ಬಳಿಕ ಲಂಡನ್ ಗೆ ಹೋಗಿ ಅಲ್ಲಿನ ಲೈಬ್ರರಿ ವ್ಯವಸ್ಥೆಯನ್ನು ನೋಡಿ ಭಾರತದಲ್ಲಿ ವ್ಯವಸ್ಥಿತ ಗ್ರಂಥಾಲಯಗಳನ್ನು ರೂಪಿಸಲು ಮುಂದಾದರು. ಅವರು ನೀಡಿದ ಪಂಚಸೂತ್ರಗಳು, ಗ್ರಂಥಾಲಯ ವ್ಯವಸ್ಥೆಯ ಮಾನದಂಡಗಳು ಇಂದಿಗೂ ದೇಶದ ಎಲ್ಲಾ ಗ್ರಂಥಾಲಯಗಳನ್ನು ರೂಪಿಸಿದೆ. ಗ್ರಂಥಾಲಯ ಕುರಿತಾದ ಕಾನೂನು ಜಾರಿಗೂ ಕಾರಣರಾಗಿರುವ ಅವರಿಗೆ ಬ್ರಿಟಿಷ್ ಸರಕಾರ ರಾವ್ ಸಾಹೇಬ, ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ” ಎಂದು ಹೇಳಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೇಜಮ್ಮ ಮಾತನಾಡಿ “ಆಧುನಿಕ ತಂತ್ರಜ್ಞಾನಗಳು ಯುವ ತಲೆಮಾರಿನ ಸಮಯ ಮತ್ತು ಸೃಜನಶೀಲ ಕನಸುಗಳನ್ನೇ ಕಿತ್ತುಕೊಳ್ಳುತ್ತಿದೆ. ಪುಸ್ತಕಗಳ ಓದಿನ ಹಸಿವಿನಿಂದ ಹೊಸ ಬಗೆಯ ಆಲೋಚನೆಗಳನ್ನು ರೂಪಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಸಮಾರಂಭದಲ್ಲಿ ಕಾರ್ಯಕ್ರಮದ ಸಂಯೋಜಕಿ ಗ್ರಂಥಾಲಯ ವಿಭಾಗದ ಶ್ರುತಿ, ಪ್ರಾಧ್ಯಾಪಕಿ ಆಶಾ ಕಿರಣ್ ಪಕ್ಕಳ, ಕೀರ್ತನಾ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುರಕ್ಷಾ ಸ್ವಾಗತಿಸಿ, ಅಪೇಕ್ಷಾ ವಂದಿಸಿ, ಮೇಘನ ಕಾರ್ಯಕ್ರಮ ನಿರೂಪಿಸಿದರು.