ಉಡುಪಿ: ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಇವರಿಗೆ ಅಭಿನಂದನಾ ಸಮಾರಂಭವು ದಿನಾಂಕ 12 ಸೆಪ್ಟೆಂಬರ್ 2024ರ ಗುರುವಾರದಂದು ಬುಡ್ಡಾರು ಯಕ್ಷಸಂಜೀವ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಾಸಕರಾದ ಯಶ್ ಪಾಲ್ ಸುವರ್ಣ ಮಾತನಾಡಿ “ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿಕೊಡುವಂತೆ ಅನೇಕ ಅನೇಕ ಶಾಲೆಗಳಿಂದ ಯಕ್ಷ ಶಿಕ್ಷಣ ಟ್ರಸ್ಟ್‌ಗೆ ಬೇಡಿಕೆ ಬರುತ್ತಿದ್ದು, ಇದರಿಂದ ಯಕ್ಷಗಾನದ ಮಹತ್ವ ಅರಿವಾಗುತ್ತದೆ. ಯಕ್ಷಗಾನದ ಮೂಲಕ ಉಡುಪಿಯ ಕೀರ್ತಿ ಹೆಚ್ಚಿಸುವ ಕೆಲಸವನ್ನು ಬನ್ನಂಜೆ ಸಂಜೀವ ಸುವರ್ಣ ಮಾಡುತ್ತಿದ್ದಾರೆ.” ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ತಮ್ಮ 70 ವರ್ಷಗಳ ಬದುಕಿನ ಹಿನ್ನೋಟವನ್ನು ತೆರೆದಿಟ್ಟರು.
ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಹಿರಿಯ ಕಲಾವಿದ ಡಾ. ಭಾಸ್ಕರಾನಂದ ಕುಮಾರ್ ಉಪಸ್ಥಿತರಿದ್ದರು. ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿ, ಡಾ. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.