ಮಂಗಳೂರು: ಮಂಗಳೂರಿನ ಸನಾತನ ನಾಟ್ಯಾಲಯದ ಗುರು ವಿದುಷಿ ಶಾರದಾಮಣಿ ಶೇಖರ್ ಅವರ 60ನೇ ವರ್ಷದ ಅಭಿನಂದನಾ ಸಮಾರಂಭ ದಿನಾಂಕ 01 ಡಿಸೆಂಬರ್ 2024ರ ಭಾನುವಾರದಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತಾಡಿ “ನೃತ್ಯ ಪ್ರಸ್ತುತಪಡಿಸುವಾಗ ಬಳಸುವ ಹಾಡುಗಳಿಗೆ ಸಾಮಾನ್ಯವಾಗಿ ತಮಿಳು ಕೃತಿಗಳನ್ನು ಬಳಸಲಾಗುತ್ತದೆ. ಅದರ ಸ್ಥಾನದಲ್ಲಿ ಕನ್ನಡ ಅಥವಾ ತುಳು ಕೃತಿಗಳನ್ನು ಅಳವಡಿಸುವ ಪ್ರಯತ್ನ ನಡೆಯಬೇಕು. ಸನಾತನ ನಾಟ್ಯಾಲಯದಂಥ ಕೇಂದ್ರಗಳು ಮತ್ತು ಇಲ್ಲಿನ ಗುರುಗಳು ಭಾರತೀಯ ಪರಂಪರೆ, ಸನಾತನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ಮಾಡುತ್ತಿವೆ. ದೇಶದ ಅಕ್ಕ-ಪಕ್ಕದಲ್ಲಿ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ ಮಕ್ಕಳು, ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಎದುರಾಗುತ್ತದೆ. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.” ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮತ್ತು ನಾತನನ ನಾಟ್ಯಾಲಯ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಮಾತನಾಡಿದರು. ಬೆಂಗಳೂರಿನ ವಕೀಲೆ ಕ್ಷಮಾ ನರಗುಂದ ಅವರು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘ ಪ್ರಕಟಿಸಿದ ಶಾರದಾಮಣಿ ಶೇಖರ್ ಅವರ ಜೀವನ ಚರಿತ್ರೆ ಕೃತಿ ಲೋಕಾರ್ಪಣೆಗೊಳಿಸಲಾಯಿತು.
ಸನಾತನ ನಾಟ್ಯಾಲಯದ ಸಹ ನಿರ್ದೇಶಕಿ ವಿದುಷಿ ಶ್ರೀಲತಾ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರೂಪಿಸಿ, ನಾಗರಾಜ ಶೆಟ್ಟಿ ವಂದಿಸಿದರು. ಶಾರದಾಮಣಿ ಶೇಖರ್ ಅವರ ಮಗಳು ವಿದುಷಿ ಶುಭಾಮಣಿ, ದೆಹಲಿಯ ಹಿಮಾಂಶು ಮತ್ತು ನಾಟ್ಯಾ ಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.