ಬೆಂಗಳೂರು : ತೊಂಬತ್ತು ವಸಂತಗಳನ್ನು ಕಂಡ ಕನ್ನಡದ ಶ್ರೇಷ್ಠ ಸಾಹಿತಿ, ವಿಮರ್ಶಕ, ಭಾಷಣಕಾರರಾದ ಪ್ರೊ. ಅ.ರಾ.ಮಿತ್ರ ಇವರ ಕೃತಿ ಅವಲೋಕನ, ಅನಾವರಣ ಮತ್ತು ಅಭಿನಂದನ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಂದು ಬೆಳಗ್ಗೆ 9-30 ಗಂಟೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಖಿಂಚ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಭಾರತೀಯ ವಿದ್ಯಾ ಭವನ ಹಾಗೂ ರಮಣಶ್ರೀ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಮಿತ್ರವೃಂದದವರು ಅರ್ಪಿಸುತ್ತಿರುವ ವಿಶೇಷ ಕಾರ್ಯಕ್ರಮ ‘ಮಿತ್ರಾವರಣ’ವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಉದ್ಘಾಟಿಸುವರು. ಖ್ಯಾತ ಸಾಹಿತಿ, ವಿಮರ್ಶಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ‘ಮಿತ್ರಾರ್ಜಿತ’ ಅಭಿನಂದನ ಗ್ರಂಥವನ್ನು ಶತಾವಧಾನಿ ಡಾ. ರಾ.ಗಣೇಶ್ ಇವರ ಜತೆಗೂಡಿ ಲೋಕಾರ್ಪಣೆಗೈಯುವರು. ಕನ್ನಡ ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ದಿಗ್ಗಜರು ಆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಪ್ರೊ. ಅ.ರಾ. ಮಿತ್ರರ ಜೀವನ ಮತ್ತು ಸಾಧನೆಯ ಬಗ್ಗೆ ಬೆಳಕು ಚೆಲ್ಲುವರು.
ಮಧ್ಯಾಹ್ನ ಗೀತ-ನೃತ್ಯ-ಕಲಾ ವೈದುಷ್ಯದ ಪ್ರದರ್ಶನವನ್ನು ಸಂಗೀತ ವಿದುಷಿ ಡಾ. ನಾಗವಲ್ಲಿ ನಾಗರಾಜ್, ನೃತ್ಯ ಗುರು ಡಾ.ಶೋಭಾ ಶಶಿಕುಮಾರ್ ಮತ್ತು ಚಿತ್ರ ಕಲಾವಿದೆ ಶ್ರೀಮತಿ.ಮಂಜುಳಾ ಪ್ರೇಮಕುಮಾರ್ ನಡೆಸಿಕೊಡುವರು. ಕಲಾ ಗಂಗೋತ್ರಿಯ ಸ್ಕಿಟ್, ವಿದೇಶದಲ್ಲಿ ಮಿತ್ರ – ಪ್ರೊ. ಎಂ. ಕೃಷ್ಣೇಗೌಡ ಮತ್ತು ಇಂದುಶ್ರೀ ರವೀಂದ್ರ ಇವರಿಂದ ಹಾಸ್ಯದ ಝಲಕ್ ಪ್ರಸ್ತುತಗೊಳ್ಳಲಿದೆ. ಸಂಜೆ ಗಂಟೆ 4-15ಕ್ಕೆ ಡಾ. ಎಸ್.ಆರ್. ಲೀಲಾರವರಿಂದ ಅಭಿನಂದನ ನುಡಿಗಳು, ಪ್ರೊ. ಅ.ರಾ. ಮಿತ್ರರವರಿಗೆ ಸನ್ಮಾನ ಹಾಗೂ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಮತ್ತು ನಾಡೋಜ ಡಾ. ಎಸ್.ಆರ್. ರಾಮಸ್ವಾಮಿಯವರ ಅಭಿನಂದನಾ ಭಾಷಣವಿರುವುದು. ನಂತರ ಪ್ರೊ. ಅ.ರಾ. ಮಿತ್ರರವರ ಕೃತಜ್ಞತಾ ನುಡಿಯೊಂದಿಗೆ ಮಿತ್ರಾವರಣ ಕಾರ್ಯಕ್ರಮ ಸಂಪನ್ನಗೊಳ್ಳುವುದು.