ಕಾಸರಗೋಡು: ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥಧಾರಿ ದೇಶಮಂಗಲ ದಿ.ಕೃಷ್ಣ ಕಾರಂತರ ಜನ್ಮದಿನಾಚರಣೆ – ಸಂಸ್ಮರಣಾ ಕಾರ್ಯಕ್ರಮವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ದಿನಾಂಕ 18 ಅಕ್ಟೋಬರ್ 2024ರ ಶುಕ್ರವಾರದಂದು ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಕುಕ್ಕೆ ಸುಬ್ರಹ್ಮಣ್ಯ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಶರ್ಮ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಜ್ಯೋತಿಷಿ ನಾರಾಯಣರಂಗಾ ಭಟ್ ಮಧೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಕವಿ ಹಾಗೂ ಸಾಹಿತಿಯಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ತಮ್ಮ ಸಂಸ್ಮರಣಾ ಭಾಷಣದಲ್ಲಿ ದೇಶಮಂಗಲ ಕೃಷ್ಣ ಕಾರಂತರು ನಡೆದು ಬಂದ ದಾರಿ, ಸಮಾಜಕ್ಕೆ ನೀಡಿದ ಕೊಡುಗೆಗಳು, ಅವರ ಬರಹಗಳ ಸಾಹಿತ್ಯದ ವಿಶೇಷತೆ ಇತ್ಯಾದಿಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ “ಡಾ. ರಮಾನಂದ ಬನಾರಿಯವರಿಗೆ ವಿಶೇಷ ಗೌರವ ಪುರಸ್ಕಾರ ನೀಡುತ್ತಿರುವುದರಿಂದ ಇಂದಿನ ಜನರಿಗೆ ಅವರೆಲ್ಲರ ಸಾಧನೆಗಳು ಮನವರಿಕೆಯಾಗುವಂತಾಯಿತು. ಪ್ರತಿಷ್ಠಾನದ ಯಾವುದೇ ಕಾರ್ಯಕ್ರಮಗಳಿದ್ದರೂ ಸದಾ ಭಾಗವಹಿಸುತ್ತೇನೆ.” ಎಂದರು. ಸಮಾರಂಭದಲ್ಲಿ ದೇಶಮಂಗಲ ಕೃಷ್ಣ ಕಾರಂತರ ಜನ್ಮ ದಿನಾಚರಣೆ ಸಂಸ್ಮರಣಾ ದಿನದ ವಿಶೇಷ ಗೌರವ ಪುರಸ್ಕಾರವನ್ನು ಡಾ. ರಮಾನಂದ ಬನಾರಿ ಇವರಿಗೆ ನೀಡಿ ಗೌರವಿಸಲಾಯಿತು.
ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಮುಖ್ಯ ಅತಿಥಿಯಾಗಿ ಯಕ್ಷಗಾನ ಭಾಗವತ ಹಾಗೂ ಪ್ರಸಂಗಕರ್ತ ದಿ. ಶಿರೂರು ಫಣಿಯಪ್ಪಯ್ಯ ಇವರ ಪುತ್ರ, ಬೈಂದೂರು ಫಣಿಗಿರಿ ಪ್ರತಿಷ್ಠಾನದ ಅಧ್ಯಕ್ಷ ಉಮೇಶ್ ಶಿರೂರು ಭಾಗವಹಿಸಿದ್ದರು. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪ್ರೊ. ಎ. ಶ್ರೀನಾಥ್ ಕಾಸರಗೋಡು, ವಾಸುದೇವ ಕಾರಂತ ಉಜಿರೆಕೆರೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ. ಎಚ್. ಡಿ. ಪದವಿ ಪಡೆದ ಕೃಷ್ಣ ಕಾರಂತರ ಮೊಮ್ಮಗಳು, ಜಯರಾಮ ಕಾರಂತರ ಪುತ್ರಿ ಶುಭಲಕ್ಷ್ಮೀ ಮಹೇಶ್ ಮಯ್ಯ ಅವರನ್ನು ಅಭಿನಂದಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಭಾಗವತ ರಾಮಕೃಷ್ಣಮಯ್ಯ ಸಿರಿಬಾಗಿಲು ಸ್ವಾಗತಿಸಿ, ಪ್ರಸನ್ನ ಕಾರಂತ ದೇಶಮಂಗಲ ನಿರೂಪಿಸಿ, ಕೆ. ಜಗದೀಶ್ ಕೂಡ್ಲು ವಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹರಿದಾಸ ಶೇಣಿ ಪರಂಪರೆಯನ್ನು ಮುಂದುವರಿಸುತ್ತಿರುವ ಶೇಣಿ ಮುರಳಿ ಅವರಿಂದ ಹರಿಕಥಾ ಕಾರ್ಯಕ್ರಮ ಹಾಗೂ ಸಭಾಕಾರ್ಯಕ್ರಮದ ಬಳಿಕ ಪ್ರಸಿದ್ದ ಕಲಾವಿದರಿಂದ ‘ಭೀಷ್ಮ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಡಗುತಿಟ್ಟಿನ ಪ್ರಸಿದ್ದ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ, ಹಿಮ್ಮೇಳದಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಶಶಿ ಆಚಾರ್ಯ ಭಾಗವಹಿಸಿದ್ದರು. ಭೀಷ್ಮನಾಗಿ ಉಜಿರೆ ಅಶೋಕ್ ಭಟ್, ಸಾಲ್ವನಾಗಿ ರಾಧಾಕೃಷ್ಣ ಕಲ್ಚಾರ್, ಅಂಬೆಯ ಪಾತ್ರದಲ್ಲಿ ಜಯಪ್ರಕಾಶ್ ಶೆಟ್ಟಿ, ಪರಶುರಾಮನಾಗಿ ಸರ್ಪಂಗಳ ಈಶ್ವರ ಭಟ್, ವೃದ್ಧ ಬ್ರಾಹ್ಮಣನಾಗಿ ವೈಕುಂಠ ಹೇರ್ಳೆ ಸಹಕರಿಸಿದರು.