ಕಾಸರಗೋಡು: ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕವು ಆರಂಭಿಸಿದ ‘ಸಾಹಿತ್ಯ ಪರಿಷತ್ನ ನಡಿಗೆ ಕನ್ನಡದ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದಡಿಯಲ್ಲಿ ಹಿರಿಯ ಪತ್ರಕರ್ತ, ತುಳು ಮತ್ತು ಕನ್ನಡ ಸಾಹಿತಿ ಮಲಾರ್ ಜಯರಾಮ ರೈ ಅವರನ್ನು ಅಭಿನಂದಿಸುವ ಕಾರ್ಯಕ್ರಮವು ದಿನಾಂಕ 30-03-2024ರಂದು ಶಿರಿಯದ ಅಡ್ಕದಲ್ಲಿರುವ ಅವರ ನಿವಾಸದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಮಲಾರ್ ಜಯರಾಮ ರೈ ದಂಪತಿಯನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಕಸಾಪ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು “ಪತ್ರಿಕಾ ರಂಗಕ್ಕೆ ಹಾಗೂ ಧಾರ್ಮಿಕ ರಂಗಕ್ಕೆ ತುಳು ಮತ್ತು ಕನ್ನಡ ಭಾಷೆ, ಸಂಸ್ಕೃತಿಗೆ ಮಲಾರ್ ಜಯರಾಮ ರೈಗಳು ನೀಡಿದ ಕೊಡುಗೆ ಅಪಾರವಾದುದು.” ಎಂದರು. ಕಣಿಪುರ ಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಉಪನ್ಯಾಸಕ ಸುರೇಶ್ ಶೆಟ್ಟಿ ಶುಭಹಾರೈಸಿದರು. ಶಿಕ್ಷಕಿ ಸಾಯಿಈಶ್ವರಿ, ಸಾಯಿಭದ್ರಾ ರೈ ಶಿರಿಯ ಹಾಗೂ ಸಾಯಿಧನ್ಯಶ್ರೀ ಉಪಸ್ಥಿತರಿದ್ದರು. ಸನ್ಮಾನಕ್ಕೆ ಜಯರಾಮ ರೈ ಅವರು ಕೃತಜ್ಞತೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ನ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಪಿ. ರಾಮಚಂದ್ರ ಭಟ್ ಧರ್ಮತ್ತಡ್ಕ ವಂದಿಸಿದರು.