ಮಂಗಳೂರು : ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ಈ ಮಾಸಾಂತ್ಯದಲ್ಲಿ ನಿವೃತ್ತರಾಗಲಿರುವ ಪಿ.ಎಸ್. ಸೂರ್ಯನಾರಾಯಣ ಭಟ್ಟರಿಗೆ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇದರ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮವು ದಿನಾಂಕ 19 ಮೇ 2025ರಂದು ನಡೆಯಿತು.
ಈ ಕಾರ್ಯಕ್ರಮ ಭಾಗವಹಿಸಿದ ಕರ್ನಾಟಕ ಯಕ್ಷ ಭಾರತಿ ಸಂಚಾಲಕರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಕರಾವಳಿಯ ಜನ ಜೀವನದೊಂದಿಗೆ ಹಾಸು ಹೊಕ್ಕಾಗಿರುವ ಮಂಗಳೂರು ಆಕಾಶವಾಣಿಯಲ್ಲಿ ಸುದೀರ್ಘಕಾಲ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಶ್ರೋತೃಗಳೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಸೂರ್ಯನಾರಾಯಣ ಭಟ್ಟರದು ತುಂಬಾ ಕ್ರಿಯಾಶೀಲ ವ್ಯಕ್ತಿತ್ವ. ಯಕ್ಷಗಾನ, ಕೃಷಿ ರಂಗ, ತುಳು – ಕನ್ನಡ ಮತ್ತು ಕೌಟುಂಬಿಕ ಕಾರ್ಯಕ್ರಮಗಳ ಮೂಲಕ ಅವರು ಆಕಾಶವಾಣಿಯನ್ನು ಜನರ ಹತ್ತಿರ ತಂದಿದ್ದಾರೆ. ಪ್ರಸ್ತುತ ಪ್ರಸಾರವಾಗುವ ಕಥಾಮೃತ, ಕೃತಿ ಸಂಪದ, ಯಕ್ಷಸಿರಿ, ಸ್ಮೃತಿ – ದ್ವನಿ, ಕಾವ್ಯ ಯಾನ ಇತ್ಯಾದಿ ಬಾನುಲಿ ಕಾರ್ಯಕ್ರಮಗಳ ಹಿಂದೆ ಸೂರ್ಯ ಭಟ್ಟರ ಪರಿಶ್ರಮ ಇದೆ” ಎಂದು ಹೇಳಿದರು.
ಕರ್ನಾಟಕ ಯಕ್ಷ ಭಾರತಿ ತಂಡದ ಎಂ.ಕೆ. ರಮೇಶಾಚಾರ್ಯ, ಪಿ.ಟಿ. ಜಯರಾಮ ಭಟ್, ಗಣರಾಜ ಕುಂಬಳೆ, ಪ್ರಶಾಂತ ರೈ ಪುತ್ತೂರು, ಉಮೇಶ ಆಚಾರ್ಯ ಗೇರುಕಟ್ಟೆ, ರಮೇಶ ಸಾಲ್ವಣ್ಕರ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಇವರು ಶಾಲು, ಹಾರ, ಫಲತಟ್ಟೆ ಹಾಗೂ ಸ್ಮರಣಿಕೆ ನೀಡಿ ಸೂರ್ಯನಾರಾಯಣರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಸ್. ಸೂರ್ಯನಾರಾಯಣ ಭಟ್ಟರು ಬಾನುಲಿ ಮಾಧ್ಯಮದ ಮೂಲಕ ಹಲವಾರು ಕಲಾತಂಡಗಳು, ನಾಡಿನ ವಿದ್ವಾಂಸರು ಮತ್ತು ಜನಸಾಮಾನ್ಯರ ಸಂಪರ್ಕ ತನಗಾಗಿದೆ ಎಂದು ತಿಳಿಸಿ, ಯಕ್ಷಗಾನ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಲತೀಶ್ ಪಾಲ್ದನೆ ಹಾಗೂ ತಾಂತ್ರಿಕ ವಿಭಾಗದ ಚಂದ್ರಶೇಖರ ಪಾಣಾಜೆ, ಅಕ್ಷತಾ ರಾಜ್ ಪೆರ್ಲ, ಚೈತನ್ಯ ಪ್ರಶಾಂತ್, ಚಂದ್ರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಬಳಗದಿಂದ ‘ಕೋಟಿ – ಚೆನ್ನಯ’ ವಿಶೇಷ ತುಳು ಯಕ್ಷಗಾನ ತಾಳಮದ್ದಳೆಯ ಧ್ವನಿ ಮುದ್ರಣ ಜರಗಿತು.