ಶ್ರೀಮತಿ ಚಂದ್ರಕಲಾ ಇಟಗಿಮಠ ಇವರ ಸಾರಥ್ಯದ ಕಪ್ಪತ್ತಗಿರಿ ಫೌಂಡೇಶನ್ (ರಿ.) ಕಳಸಾಪುರ ಗದಗ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದಿನಾಂಕ 09 ಮಾರ್ಚ್ 2025ರಂದು ಬಂಜಾರ ಭವನದಲ್ಲಿ ಆಯೋಜಿಸಿದ್ದ ಅದ್ದೂರಿ ಮಹಿಳಾ ಸಮ್ಮೇಳನದಲ್ಲಿ ಆಹ್ವಾನಿತನಾಗಿ ಪಾಲ್ಗೊಂಡಿದ್ದು, ಸಾಹಿತ್ಯಕ್ಷೇತ್ರದ ಸಾಧನೆಗಾಗಿ ವಿಶೇಷ ಗೌರವ ಸ್ವೀಕರಿಸಿ, ಪುರಸ್ಕೃತನಾಗಿದ್ದು, ಮರೆಯಲಾಗದ ಅಪೂರ್ವ ಅನುಭವ. ಅವರ್ಣನೀಯ ಆನಂದಾನುಭೂತಿಯ ಅನುಭಾವ.
ದಿವ್ಯಶ್ರೀಗಳ ಸಾನಿಧ್ಯ, ಅತ್ಯಂತ ಗಣ್ಯ-ಮಾನ್ಯರ ಉಪಸ್ಥಿತಿ, ನೂರಾರು ವಿವಿಧ ಕ್ಷೇತ್ರದ ಅಪರೂಪದ ಸಾಧಕರ ಸಮಾಗಮ, ನಾಡಿನ ಮೂಲೆ-ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಸಾಧಕ-ಸಾಧಕಿಯರು, ಕವಿ-ಕವಯತ್ರಿಯರು, ಲೇಖಕಿಯರು, ಕಲಾವಿದರು, ಸಾಹಿತ್ಯಾಸಕ್ತರ ಭವ್ಯ ಸಮ್ಮಿಲನ.
ಅತಿಥಿ ಮಹೋದಯರ ಅರ್ಥಪೂರ್ಣ ಭಾಷಣ, ಶ್ರೀಗಳ ದಿವ್ಯಾಶೀರ್ವಚನ, ಸಮ್ಮೇಳನಾಧ್ಯಕ್ಷೆ ಶ್ರೀಮತಿ ರತ್ನಾ ಗಿ. ಬದಿ ಇವರ ಭಾವಪೂರ್ಣ ಮಾತುಗಳು, ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದ ಮುಖ್ಯ ರೂವಾರಿ ಶ್ರೀಮತಿ ಚಂದ್ರಕಲಾ ಇಟಗಿಮಠ ಇವರ ಸ್ಪೂರ್ತಿದಾಯಕ ನುಡಿಗಳು ಸಮಾರಂಭದ ಮೆರುಗನ್ನು ನೂರ್ಮಡಿಗೊಳಿಸಿತು.
140 ಕವಯಿತ್ರಿಯರ ’ಭೂಮಿ ತೂಕದಾಕೆ’ ಕೃತಿ ಬಿಡುಗಡೆ, ಕವಯತ್ರಿಯರಿಗೆ ಗೌರವ ಸಮ್ಮಾನ, ವಿವಿಧ ಕ್ಷೇತ್ರದ ನೂರಾರು ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ, ನೂರಾರು ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪುರಸ್ಕಾರ, ಕವಿಗೋಷ್ಠಿ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ, ನಂದಿಧ್ವಜ ಕುಣಿತ, ಜಾನಪದ ಕಲೆಗಳ ಪ್ರದರ್ಶನ, ರುಚಿಕರ ಉಟೋಪಚಾರ ಹೀಗೇ ಇಡೀ ದಿನ ಸ್ತ್ರೀಶಕ್ತಿಯ ಕನ್ನಡದ ಹಬ್ಬ, ವಿಶ್ವ ಮಹಿಳಾದಿನದ ಮಹೋತ್ಸವ.
ಅಂತರರಾಷ್ಟ್ರೀಯ ಮಹಿಳಾದಿನವನ್ನು ಭರ್ಜರಿಯಾಗಿ ಸಂಪನ್ನಗೊಳಿಸಿ, ಕನ್ನಡದ ನಾರಿಶಕ್ತಿಯ ಭವ್ಯ ಅನಾವರಣಗೊಳಿಸಿ, ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾದ ಶ್ರೀಮತಿ ಚಂದ್ರಕಲಾ ಮೇಡಂ ಹಾಗೂ ಅವರ ಸಮಸ್ತ ಬಳಗ ನಿಜಕ್ಕೂ ಅಭಿನಂದನಾರ್ಹರು. ಇಂತಹ ಅದ್ವಿತೀಯ ಸಮಾರಂಭಕ್ಕೆ ಸಾಕ್ಷಿಯಾಗಿ, ಸನ್ಮಾನಿತಗೊಂಡು ಸಂಭ್ರಮಿಸುವ ಸುವರ್ಣಾವಕಾಶ ಕಲ್ಪಿಸಿದ ಶ್ರೀಮತಿ ಚಂದ್ರಕಲಾ ಇಟಗಿಮಠ ಮತ್ತು ಕಪ್ಪತ್ತಗಿರಿ ಫೌಂಡೇಶನ್ನಿನ ಸಕಲ ಪದಾಧಿಕಾರಿಗಳಿಗೂ ನಾನು ಚಿರಋಣಿ.
ಮುಖಪುಟ, ವಾಟ್ಸಾಪಿನಲ್ಲಿ ನಿತ್ಯವೂ ನನ್ನ ಕವಿತೆಗಳನ್ನೋದಿ ಮೆಚ್ಚಿ, ಹರಸಿ, ಹಾರೈಸುವ, ಅನವರತ ಆಶೀರ್ವದಿಸುವ ನೂರಾರು ಅಕ್ಷರಬಂಧುಗಳ ಮುಖಾಮುಖಿಯಾದದ್ದು, ಅವರ ನಗೆ-ನುಡಿಗಳೊಡನೆ ಜೊತೆಯಾದದ್ದು, ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು, ಮರೆಯಲಾಗದ ಮಧುರ ಅವಿಸ್ಮರಣೀಯ ಅನುಭವ. ಅಕ್ಕರಾಮೃತವಿಟ್ಟು ಅಭಿಮಾನಿಸಿದ ಆ ಎಲ್ಲ ಭಾವಜೀವಿಗಳಿಗೂ ನಾನು ಅಕ್ಷರಶಃ ಆಭಾರಿ.
– ಎ.ಎನ್. ರಮೇಶ್ ಗುಬ್ಬಿ