ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ‘ಹಿರಿಯ ಸಾಹಿತಿಗಳ ಸಂಪರ್ಕ’ ಅಭಿಯಾನದ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರ ಭಾನುವಾರ ಜಾನಪದ ವಿದ್ವಾಂಸ, ಹಿರಿಯ ಸಾಹಿತಿ ಡಾ. ಗಣೇಶ್ ಅಮೀನ್ ಸಂಕಮಾರ್ ಇವರ ಸ್ವಗೃಹದಲ್ಲಿ ನಡೆಯಿತು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ “ಅಕ್ಷರ ಲೋಕಕ್ಕೆ ಪ್ರಬಲವಾದ ಶಕ್ತಿ ಇದೆ. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದುವ ಅಭಿರುಚಿ ಬೆಳೆಸುವುದು ಅವಶ್ಯವಾಗಿದೆ. ಗೂಗಲ್ ಬದಲು ಗ್ರಂಥಾಲಯ ಅವಲಂಬಿಸಲು ಪ್ರೇರಣೆ ನೀಡಬೇಕು. ಸಾಹಿತ್ಯದ ಮೂಲಬೇರು ನಮ್ಮ ಜನಪದದಲ್ಲಿದೆ. ಬದುಕಿನ ನೋವು ಜನಪದ ಸಾಹಿತ್ಯದ ಮೂಲಕ ಹೊರಹೊಮ್ಮಲು ಸಾಧ್ಯವಾಗಿದೆ. ಸಾಹಿತಿಗಳು ಮನಸ್ಸುಗಳನ್ನು ಕಟ್ಟುವ ಜತೆಗೆ ಸಮಾಜದ ಧ್ವನಿಯಾಗಬೇಕು. ಇಂದು ಸಾಹಿತ್ಯ ಸಮ್ಮೇಳನಗಳು ರಾಜಕೀಯ ಅಬ್ಬರದ ಪ್ರದರ್ಶನವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಮ್ಮೇಳನ ನಿಜಾರ್ಥದಲ್ಲಿ ಸಾಹಿತಿಗಳ ಸಮ್ಮೇಳನವಾಗಬೇಕು” ಎಂದು ಅಭಿಪ್ರಾಯ ಪಟ್ಟರು.
ಅ. ಭಾ. ಸಾ. ಪ. ಜಿಲ್ಲಾ ಖಜಾಂಜಿ ಭಾಸ್ಕರ ರೈ ಕಟ್ಟ, ಸಾಹಿತ್ಯ ಕೂಟದ ಮುಖ್ಯಸ್ಥೆ ಗೀತಾ ಲಕ್ಷ್ಮೀಶ್, ಮೂಲ್ಕಿ ಘಟಕದ ಅಧ್ಯಕ್ಷ ಸರ್ವೋತ್ತಮ ಅಂಚನ್, ಕಾರ್ಯಕಾರಿ ಸಮಿತಿ ಸದಸ್ಯ ಯಾದವ ದೇವಾಡಿಗ, ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಸ್ಟಿ ಬಿ. ರತ್ನಾಕರ ರಾವ್, ಜಯಂತಿ ಸಂಕಮಾರ್, ಭವ ಸಂಕಮಾರ್ ಉಪಸ್ಥಿತರಿದ್ದರು. ಅ. ಭಾ. ಸಾ. ಪ. ದ. ಕ. ಜಿಲ್ಲಾಧ್ಯಕ್ಷ ಪಿ. ಬಿ. ಹರೀಶ್ ರೈ ಸ್ವಾಗತಿಸಿ, ಸುಮಂಗಲಾ ರತ್ನಾಕರ್ ವಂದಿಸಿದರು.