ಮಂಗಳೂರು: ಪುತ್ತೂರು ತಾಲೂಕು ಸರ್ವೆ ಗ್ರಾಮದ ಕಲ್ಪನೆಯಲ್ಲಿ ನಾಲ್ಕು ದಶಕಗಳ ಹಿಂದೆ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸ್ಥಾಪಿಸಿದ ನಿವೃತ್ತ ಅರಣ್ಯ ರಕ್ಷಕ ಮತ್ತು ಯಕ್ಷಗಾನ ಕಲಾಪೋಷಕ ಕಲ್ಪನೆ ಚಂದು ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 29 ಡಿಸೆಂಬರ್ 2024ರಂದು ನಡೆಯಿತು.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ವಯೋವೃದ್ಧ ಚಂದು ಗೌಡ ಮತ್ತು ನೀಲಮ್ಮ ದಂಪತಿಯನ್ನು ಶಕ್ತಿನಗರದಲ್ಲಿರುವ ಅವರ ಮಗಳ ಮನೆಯಲ್ಲಿ ಶಾಲು ಸ್ಮರಣಿಕೆ ಮತ್ತು ಫಲ ವಸ್ತುಗಳೊಂದಿಗೆ ಸನ್ಮಾನಿಸಿದರು.
ತಮ್ಮ ಕಾಲೇಜು ದಿನಗಳಲ್ಲಿ ಹವ್ಯಾಸಿ ಕಲಾವಿದರ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳಿಗೆ ಚಂದು ಗೌಡರು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿ ಮಾತನಾಡಿದ ಭಾಸ್ಕರ ರೈ ಕುಕ್ಕುವಳ್ಳಿ “ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೋಟೆಕಾರ್ ಶಂಕರ ಮಠದ ಧರ್ಮಾಧಿಕಾರಿ ಬೋಲ್ಲಾವ ಸತ್ಯ ಶಂಕರರು ನೀಡುತ್ತಿದ್ದ ಯಕ್ಷಗಾನ ತರಬೇತಿ ಸಂದರ್ಭದಲ್ಲಿ ಮಿತ್ರ ಬೊಟ್ಯಾಡಿ ರಾಮಣ್ಣ ರೈಯವರೊಂದಿಗೆ ಆ ಕಾಲದ ಹವ್ಯಾಸಿ ಕಲಾವಿದರನ್ನು ಒಟ್ಟುಗೂಡಿಸಿ ಪ್ರದರ್ಶಿಸಿದ ಪೂರ್ಣ ಪ್ರಮಾಣದ ಬಯಲಾಟಗಳಿಗೆ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹಿಸಿದ ಚಂದು ಗೌಡರ ಯಕ್ಷಗಾನ ಕಲಾ ಪ್ರೇಮ ಹಾಗೂ ಧಾರ್ಮಿಕ ಸೇವಾ ಕಾರ್ಯಗಳು ಅನನ್ಯವಾದುದು. ದೇವಸ್ಥಾನದ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಪುತ್ತೂರಿನ ಕರ್ನಾಟಕ ಯಕ್ಷ ಭಾರತಿಯ ವತಿಯಿಂದ ‘ಶ್ರೀದೇವಿ ಮಹಾತ್ಮೆ’, ‘ಭಾರ್ಗವ ವಿಜಯ’, ‘ಅತಿಕಾಯ ಇಂದ್ರಜಿತು ಮೈರಾವಣ ಕಾಳಗ’, ‘ಕುಮಾರ ವಿಜಯ’, ‘ಸಮಗ್ರ ಕುರುಕ್ಷೇತ್ರ’, ‘ಶ್ವೇತಕುಮಾರ ಚರಿತ್ರೆ’ ಇತ್ಯಾದಿ ಪ್ರಸಂಗಗಳ ಇಡೀ ರಾತ್ರಿಯ ಬಯಲಾಟಗಳನ್ನು ಆಡಲಾಗಿತ್ತು. ಹವ್ಯಾಸಿಗಳೊಂದಿಗೆ ಹಿರಿಯ ಕಲಾವಿದರಾದ ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಬಣ್ಣದ ಮಾಲಿಂಗ, ಕಾಂಚನ ಸಂಜೀವ ರೈ, ಪುತ್ರಕಳ ತಿಮ್ಮಪ್ಪ ಹಾಸ್ಯಗಾರ್, ಗುಬ್ಯ ರಾಮಯ್ಯ ರೈ, ಕುಂಬ್ಳೆ ಶ್ರೀಧರ ರಾವ್, ಕೆ. ಎಂ. ಕೃಷ್ಣ ಪಾಟಾಲಿ ಅಲ್ಲದೆ ಪ್ರಸಿದ್ಧ ಭಾಗವತರಾದ ದಿ. ದಾಸರಬೈಲು ಚನಿಯ ನಾಯ್ಕ, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಬೊಟ್ಯಾಡಿ ರಾಮಯ್ಯ ರೈ, ಆನೆಗುಂಡಿ ಗಣಪತಿ ಭಟ್ ಮುಂತಾದ ಹಿಮ್ಮೇಳ ದಿಗ್ಗಜರು ಭಾಗವಹಿಸಿದ್ದರು. ಆಗ ಚಂದು ಗೌಡರು ಕಲಾವಿದರಿಗೆ ತೋರಿದ ಗೌರವಾದರ ಸ್ಮರಣೀಯ.” ಎಂದವರು ನುಡಿದರು.
ಈ ಸಂದರ್ಭದಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡ ಹಾಗೂ ಚಂದು ಗೌಡರ ಪುತ್ರಿ ಸುಮಿತ್ರ ಮತ್ತು ಅಳಿಯ ಸುರೇಶ್ ಉಪಸ್ಥಿತರಿದ್ದರು.