ಬೆಳ್ತಂಗಡಿ : ಹಿರಿಯ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಇವರನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಶ್ರೀನಿಲಯದಲ್ಲಿ ದಿನಾಂಕ 27-05-2024 ರಂದು ಗೌರವಿಸಲಾಯಿತು.
ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ, ಶ್ರೀಮತಿ ಸ್ವರ್ಣಲತಾ ಭಾಸ್ಕರ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.
88 ವರ್ಷದ ಹಿರಿಯ ವಿದ್ವಾಂಸರಾದ ಶಾಸ್ತ್ರಿಯವರು ‘ಮಹಾಭಾರತ ಕೋಶ’, ‘ರಾಮಾಯಣ ಕೋಶ’, ‘ಭಾಗವತ ಕೋಶ’, ‘ಪುರಾಣ ಕಥಾ ಚಿಂತಾ ರತ್ನ’ ಮುಂತಾದ ಅಪೂರ್ವ ಕೃತಿಗಳನ್ನು ರಚಿಸಿದ್ದು, ಯಕ್ಷಗಾನಾಸಕ್ತರಿಗೆ ಬಹಳ ಉಪಯುಕ್ತವಾಗಿದೆ. ಕಳೆದ ಮೂರು ವರ್ಷಗಳಿಂದ ಅರ್ಥಧಾರಿಯಾಗಿ ಭಾಗವಹಿಸದೆ ಇದ್ದರೂ ಆರೋಗ್ಯವಾಗಿದ್ದು ತನ್ನ ಜ್ಞಾನ ಹಾಗೂ ಅನುಭವಗಳನ್ನು ಕಲಾಸಕ್ತರ ಜೊತೆ ಹಂಚಿಕೊಳ್ಳುತ್ತ ಸಕ್ರಿಯವಾಗಿದ್ದಾರೆ.