ಕೋಟ : ಸಾಲಿಗ್ರಾಮದ ಗೆಂಡೆಕೆರೆಯಲ್ಲಿ ಪಿ.ವಿ. ಆನಂದ ಸಾಲಿಗ್ರಾಮರವರಿಗೆ ಅವರ 50ನೇ ಯಕ್ಷಗಾನ ಪ್ರಸಂಗವಾದ ‘ಆವರ್ಸೆ ಶ್ರೀ ಶಂಕರ ನಾರಾಯಣ ಮಹಾತ್ಮೆ’ ಪ್ರಸಂಗದ 50ನೆಯ ಪ್ರಯೋಗದ ಸಂದರ್ಭದಲ್ಲಿ ಹುಟ್ಟೂರ ಸನ್ಮಾನವು ದಿನಾಂಕ 03-03-2024ರಂದು ನಡೆಯಿತು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತನಾಡಿ “ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಪಿ.ವಿ. ಆನಂದ ಸಾಲಿಗ್ರಾಮ ಅವರು ಕವಿ, ಸಮೀಕ್ಷಕ, ನಿರೂಪಕ, ಯಕ್ಷಗಾನ ಪ್ರಸಂಗಕರ್ತ, ಕಲಾವಿದ, ರಾಜ್ಯ ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಶಿಕ್ಷಕ, ಸಾಹಿತ್ಯ ಪರಿಷತ್ತಿನ ಸಂಘಟಕ, ನಾಟಕಕಾರ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಪ್ರಬುದ್ಧತೆಯನ್ನು ಗಳಿಸಿಕೊಂಡ ಅನನ್ಯ ಪ್ರತಿಭೆ. ಐವತ್ತಮೂರು ಯಕ್ಷಗಾನ ಪ್ರಸಂಗಗಳನ್ನು ಕಿರಿಯ ವಯಸ್ಸಿನಲ್ಲಿ ರಚಿಸಿದ ಸಾಧನೆ ಬೆರಗು ಮೂಡಿಸುವಂತದ್ದು, ಅವರ ಸಾಧನೆ ಸಾಲಿಗ್ರಾಮಕ್ಕೆ ದೊಡ್ಡ ಹೆಮ್ಮೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ ಐತಾಳ ವಹಿಸಿದ್ದರು. ಆವರ್ಸೆ ಶ್ರೀ ಶಂಕರ ನಾರಾಯಣ ದೇವಳದ ಮೊಕ್ತೇಸರ ಮತ್ತು ಕುಂದಾಪುರ ಬಂಟರ ಸಂಘದ ಅಧ್ಯಕ್ಷರಾದ ಆವರ್ಸೆ ಸುಧಾಕರ ಶೆಟ್ಟಿ ಸನ್ಮಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಚಿತ್ತೂರು ಪ್ರಭಾಕರ ಶೆಟ್ಟಿ, ಸಾಲಿಗ್ರಾಮ ಪ.ಪಂ. ಮಾಜಿ ಅಧ್ಯಕ್ಷ ಸಾಧು, ಸ್ಥಳೀಯ ವೈದ್ಯರಾದ ಡಾ. ಗಣೇಶ್, ಸೂರಾಲು ಮೇಳ ಮ್ಯಾನೇಜರ್ ಸೂರಾಲು ರವಿ ಕುಮಾರ್, ಭಾಗವತರಾದ ತಿಮ್ಮಪ್ಪ ದೇವಾಡಿಗ ಉಪಸ್ಥಿತರಿದ್ದರು. ಗೆಂಡೆಕೆರೆ ಸೌಹಾರ್ದ ಬಳಗದ ಅಬ್ದುಲ್ ಬಶೀರ್ ಸ್ವಾಗತಿಸಿ, ಭಾಗವತ ಕೃಷ್ಣ ಪಿ.ಎಂ. ವಂದಿಸಿ, ಸಾಲಿಗ್ರಾಮ ಪ. ಪಂ. ಸದಸ್ಯ ಶ್ರೀನಿವಾಸ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಸೂರಾಲು ಮೇಳದ ಎಲ್ಲಾ ಕಲಾವಿದರನ್ನು ಆವರ್ಸೆ ದೇವಳದ ವತಿಯಿಂದ ಗೌರವಿಸಲಾಯಿತು.