ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ‘ಹಿರಿಯ ಕವಿ ಮನೆ ಭೇಟಿ’ ಸರಣಿ ಕಾರ್ಯಕ್ರಮದನ್ವಯ ಈ ಬಾರಿ ಕನ್ನಡದ ದೈನಿಕಗಳಾದ ನವ ಭಾರತ, ಉದಯವಾಣಿ ಮತ್ತು ಹೊಸದಿಗಂತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕನ್ನಡ ಮತ್ತು ತುಳು ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ರತ್ನ ಕುಮಾರ್ ಎಂ. ಇವರ ಮನೆಗೆ ದಿನಾಂಕ 14 ಮೇ 2025ರಂದು ಭೇಟಿ ನೀಡಿ ಅವರನ್ನು ಹಾರ, ಶಾಲು, ಪೇಟ ಹಾಗೂ ಹಣ್ಣು ಹಂಪಲುಗಳನ್ನು ಸಮರ್ಪಿಸಿ, ಸನ್ಮಾನಿಸಿ, ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.
ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಕ.ಸಾ.ಪ. ಕೇಂದ್ರ ಮಾರ್ಗದರ್ಶನ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರು ಪ್ರಸ್ತಾವಿಸಿ, ಸ್ವಾಗತಿಸಿದರು. ರತ್ನಕುಮಾರ್ ಇವರ ಬದುಕು ಬರಹಗಳ ಪರಿಚಯವನ್ನು ಗೌರವ ಕಾರ್ಯದರ್ಶಿಗಳಾದ ಗಣೇಶ್ ಪ್ರಸಾದಜೀ ಇವರು ಮಾಡಿಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನ ಕುಮಾರ್ ಇವರು ತಾನು ಬೆಳೆದು ಬಂದ ಹಾದಿಯನ್ನು ಹಂಚಿಕೊಂಡು “ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಸಾಹಿತಿಗಳಂತೂ ಹೊಸ ದೃಷ್ಟಿ, ಹೊಸ ಸೃಷ್ಟಿಯೊಂದಿಗೆ ಹೊಸ ಕೊಡುಗೆಗಳನ್ನು ನೀಡುತ್ತಲೇ ಇರಬೇಕು. ಹಿರಿಯ ಕವಿಗಳನ್ನು ಮನೆಗೇ ಬಂದು ಆತ್ಮೀಯವಾಗಿ ಸನ್ಮಾನಿಸುವ ಪರಿಷತ್ತಿನ ಕಾರ್ಯಕ್ರಮ ಅಭಿನಂದನೀಯ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಪ್ರತಿನಿಧಿ ಸನತ್ ಕುಮಾರ್ ಜೈನ್, ರತ್ನ ಕುಮಾರ್ ಇವರ ಪತ್ನಿ ಎಂ.ಎನ್. ಇಂದಿರಾ, ಪುತ್ರ ಅಜಿತ ಕುಮಾರ್, ಸೊಸೆ ಪ್ರದೀಪ್ತಾ ಅಜಿತ್, ಮೊಮ್ಮಕ್ಕಳು ಮತ್ತು ರತ್ನ ಕುಮಾರ್ ಇವರ ಅಭಿಮಾನಿ ವೃಂದದವರು ಉಪಸ್ಥಿತರಿದ್ದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು.