ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತಿನ ವಿಜಯಪುರ ಜಿಲ್ಲಾ ಶಾಖೆ, ಪಿ. ಡಿ. ಜೆ. ಶಾಲೆ ಹಾಗೂ ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಕುಮಾರವ್ಯಾಸ ಪ್ರಶಸ್ತಿ’ ಪುರಸ್ಕೃತ ಗಮಕ ಕಲಾವಿದೆ ಶ್ರೀಮತಿ ಶಾಂತಾ ಕೌತಾಳ ಇವರಿಗೆ ಸನ್ಮಾನ ಹಾಗೂ ಗಮಕ ವಾಚನ ಸಮಾರಂಭವು ದಿನಾಂಕ 12-07-2024ರಂದು ವಿಜಯಪುರದ ಪಿ. ಡಿ. ಜೆ. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ. ಡಿ. ಜೆ. ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ದೇವಕಿ ಕೆ. ಕುಲಕರ್ಣಿ ಮಾತನಾಡಿ “ಗಮಕ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ನೀತಿಮಟ್ಟ ಹೆಚ್ಚುತ್ತದೆ.” ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಿವಾಸ ಬಾಳಾಜಿ ಕುಲಕರ್ಣಿ, ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ.ಎಂ.ಪಾಟೀಲ, ಗಮಕಿಗಳಾದ ಶ್ರೀಮತಿ ಭೂದೇವಿ ಕುಲಕರ್ಣಿ, ಪುಷ್ಪಾ ಕುಲಕರ್ಣಿ, ಕಲ್ಯಾಣರಾವ್ ದೇಶಪಾಂಡೆ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರ ಭಗವದ್ಗೀತೆಯ ಪಠಣದೊಂದಿಗೆ ಸಮಾರಂಭವು ಆರಂಭಗೊಂಡಿತು. ಗಮಕ ಪರಿಷತ್ತಿನ ಸದಸ್ಯರಾದ ಶ್ರೀ ಎಸ್. ಎಂ. ಜೇವರ್ಗಿ ಸಭಿಕರನ್ನು ಸ್ವಾಗತಿಸಿದರು. ಬಿ. ಎಂ. ಪಾಟೀಲ್ ಇವರು ಕರ್ನಾಟಕ ಗಮಕ ಪರಿಷತ್ತಿನ ಬೆಳವಣಿಗೆಯನ್ನು ಸಭಿಕರಿಗೆ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಗಮಕ ಕಾರ್ಯಕ್ರಮ ನಡೆಯಿತು. ಗಮಕಿಗಳಾದ ಪುಷ್ಪಾ ಮತ್ತು ಭೂದೇವಿ ಇವರು ತೊರವೆ ರಾಮಾಯಣದ ಅಯೋಧ್ಯಾಕಾಂಡದ `ಭರತನ ಸೋದರ ಪ್ರೇಮ’ ಪ್ರಸಂಗದ ಆಯ್ದ ಪದ್ಯಗಳ ಕಾವ್ಯವಾಚನ ಮಾಡಿದರು. ವ್ಯಾಖ್ಯಾನಕಾರರಾದ ಶ್ರೀ ಕಲ್ಯಾಣರಾವ್ ದೇಶಪಾಂಡೆಯವರು ವಿದ್ಯಾರ್ಥಿಗಳಿಗೆ ತಿಳಿಯುವಂತೆ ಭರತ ಹಾಗೂ ರಾಮರ ಆದರ್ಶ ಸೋದರ ಪ್ರೇಮ ಹಾಗೂ ಮಾನವೀಯ ಗುಣಗಳ ವಿವರಣೆ ನೀಡಿದರು. ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ ಕುಲಕರ್ಣಿಯವರು ಗದುಗಿನ ಭಾರತದ ವಿರಾಟ ಪರ್ವದ ಆಯ್ದ ಪದ್ಯಗಳ ಗಮಕ ವಾಚನ-ವ್ಯಾಖ್ಯಾನ ಮಾಡಿದರು. ನಂತರ ಸಭೆಯಲ್ಲಿ ಹಿರಿಯ ಗಮಕ ಕಲಾವಿದೆ ಶಾಂತಾ ಕೌತಾಳರನ್ನು ಗಮಕ ಪರಿಷತ್ತಿನ ಪರವಾಗಿ ಪ್ರಶಸ್ತಿ ಲೇಖನ ಸಹಿತವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಗಮಕ ಪರಿಷತ್ತಿನ ಸದಸ್ಯರಾದ ಶ್ರೀ ಪರಮಾನಂದ ಪೂಜಾರಿ, ಶಿವಾಜಿ ಮೋರೆ, ಬಿ. ಕೆ. ಗೋಟ್ಯಾಳ, ಮೋಹನ್ ಕೌತಾಳ್, ಶ್ರೀಲಕ್ಷ್ಮೀ ಕೌತಾಳ್, ಪ್ರಮಿಳಾ ದೇಶಪಾಂಡೆ, ಅನಂತ್ ದಾನಿ, ವಿಜಯೀಂದ್ರ ಪಾಟೀಲ್, ಶಿವು ಪಾಟೀಲ್, ರಾಘವೇಂದ್ರ ದೇಶಪಾಂಡೆ ಹಾಗೂ ಕಾಲೇಜು ಪ್ರಾಧ್ಯಾಪಕ ವರ್ಗದವರು ಭಾಗವಹಿಸಿದ್ದರು.