ಉಡುಪಿ : ಅಂಬಲಪಾಡಿಯ ನಿವಾಸಿ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಇವರು ಕನ್ನಡ ಮತ್ತು ತುಳು ಬರಹಗಾರ್ತಿಯಾಗಿ ಪ್ರಸಿದ್ಧಿ ಪಡೆದವರು. ಬಿ.ಎಡ್. ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮೋ ಪದವಿ ಪಡೆದಿರುವ ವಸಂತಿ ಶೆಟ್ಟಿಯವರು ಸುಮಾರು 15ಕ್ಕೂ ಹೆಚ್ಚು ಕನ್ನಡ ಮತ್ತು ತುಳು ಭಾಷೆಯಲ್ಲಿ ಕೃತಿಗಳನ್ನು ರಚಿಸಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿದ್ದು ಪ್ರಸ್ತುತ ಸ್ವಯಂ ನಿವೃತ್ತಿ ಪಡೆದಿದ್ದು, ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಸುಮಾರು 30 ವರ್ಷಗಳಿಂದ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕವಿ ಸಮ್ಮೇಳನಗಳಲ್ಲಿ ಇವರು ಭಾಗವಹಿಸಿರುತ್ತಾರೆ. ಉಡುಪಿ ನಗರಸಭೆಯಲ್ಲಿ ಮೂರು ಬಾರಿ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಗೊಂಡಿರುತ್ತಾರೆ.
ಇವರು ಕನ್ನಡ ನಾಡು ನುಡಿ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಉಡುಪಿ ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತ್ತಿ ಬಹುಮಾನ, ಮುಂಬೈಯ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ಲಯನ್ಸ್, ರೋಟರಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಹಲವು ಬಾರಿ ಗೌರವ ಸನ್ಮಾನಗಳನ್ನು ಪಡೆದುಕೊಂಡಿರುತ್ತಾರೆ. ವಸಂತಿ ಶೆಟ್ಟಿ ಬ್ರಹ್ಮಾವರ ಇವರ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಕ 08 ಮಾರ್ಚ್ 2025ರಂದು ಸಂಜೆ 3-30 ಗಂಟೆಗೆ ಉಡುಪಿ ಅಂಬಲಪಾಡಿಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ಬಹಳ ಪ್ರೀತಿ ಗೌರವದಿಂದ ಅಭಿನಂದಿಸುತಿದ್ದೇವೆ.