ಕೋಟ : ಕೋಟ ವೈಕುಂಠರ ಕುಟುಂಬದ ಸದಸ್ಯರು ಕೋಟ ಸ್ವಗೃಹದಲ್ಲಿ ಆಯೋಜಿಸಿದ ಅಮೃತೇಶ್ವರಿ ಮೇಳದ ಬಯಲಾಟ ಕಾರ್ಯಕ್ರಮವು ದಿನಾಂಕ 18-03-2024ರಂದು ನಡೆಯಿತು.ಇದೇ ಸಂದರ್ಭದಲ್ಲಿ ಮೇಳದ ಕಲಾವಿದರಾದ ಮೊಳಹಳ್ಳಿ ಕೃಷ್ಣ ನಾಯಕ್ ಹಾಗೂ ಸೀತಾರಾಮ ಹೆಗಡೆಯವರನ್ನು ಕುಟುಂಬದ ಪರವಾಗಿ ‘ಕೋಟ ವೈಕುಂಠ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾವಿದರನ್ನು ಅಭಿನಂದಿಸಿ ಮಾತನಾಡಿದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ “ಕೋಟ ವೈಕುಂಠ ಅವರು ಒಬ್ಬ ಶ್ರೇಷ್ಠ ಕಲಾವಿದ. ಗರತಿ, ರಾಣಿ, ವಯ್ಯಾರಿ, ವೀರ ನಾರಿ ಯಾವುದೇ ಪಾತ್ರವಿರಲಿ ಎಲ್ಲದಕ್ಕೂ ಸೈ ಎನಿಸಿಕೊಂಡವರು. ಖ್ಯಾತ ಸ್ತ್ರೀ ವೇಷಧಾರಿಗಳಾದ ಕೊಕ್ಕರ್ಣೆ ನರಸಿಂಹ ಕಾಮತ್, ಹಾರಾಡಿ ನಾರಾಯಣ ಗಾಣಿಗರ ಬಳಿಕ ಆ ಸಾಲಿನಲ್ಲಿ ಗುರುತಿಸಿಕೊಂಡ ಅಪ್ರತಿಮ ಕಲಾವಿದ. ಅವರ ಮೈಯ್ಯ ಬಾಗು ಬಳುಕು, ಅಂಗ ಆಕಾರವೇ ಅವರಿಗೆ ವರಪ್ರದವಾದುದು. ಅವರ ಹೆಸರಿನಲ್ಲಿ ಕೊಡ ಮಾಡುವ ಪುರಸ್ಕಾರವನ್ನು ಪಡೆಯುವುದೆ ಕಲಾವಿದನೊಬ್ಬನ ಪುಣ್ಯ” ಎಂದು ಹೇಳಿದರು.
ಕೋಟ ಗೀತಾನಂದ ಫೌಂಡೇಶನಿನ ಪ್ರವರ್ತಕರಾದ ಆನಂದ ಸಿ. ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೋಟ ವೈಕುಂಠರ ಪುತ್ರರಾದ ಉಮೇಶ್ ರಾಜ್, ಮುಖೇಶ್, ಕುಟುಂಬ ಸದಸ್ಯರಾದ ಆನಂದ ಮರಕಾಲ, ನರಸಿಂಹ ಮರಕಾಲ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್, ಕೋಟ ಮೊಗವೀರ ಸಂಘಟನೆಯ ಮಾಜಿ ಅಧ್ಯಕ್ಷ ರಮೇಶ್ ವಿ. ಕುಂದರ್, ಕೋಟ ಸಿ. ಏ. ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್, ಮೇಳದ ಪ್ರಬಂಧಕ ಕೋಟ ಸುರೇಶ್, ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
1 Comment
ಶುಭಾಶಯಗಳು ಚಿಕ್ಕಮ್ಮ ,ಶ್ರೀ ಕೃಷ್ಣ ಪರಮಾತ್ಮ ನಿಮಗೆ ಒಳ್ಳೆಯ ಆರೋಗ್ಯ ಮತ್ತು ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ