ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಲೆ ಕ್ಷೇತ್ರದಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಹೊಸ ತಲೆಮಾರನ್ನೇ ಸೃಷ್ಟಿಸುತ್ತಿರುವ ಮಹಿಳಾ ಕಲಾವಿದೆಯರಿಗೆ ಸನ್ಮಾನ ಹಾಗೂ ಕಲಾವಿದೆಯರಿಂದ ‘ಸೀತಾ ಪರಿತ್ಯಾಗ’ ತಾಳಮದ್ದಲೆ ಕಾರ್ಯಕ್ರಮವು ಆನಂದ ರಾವ್ ವೃತ್ತದ ಬಳಿಯಿರುವ ಕೆ.ಪಿ.ಟಿ.ಸಿ.ಎಲ್. ಲೆಕ್ಕಾಧಿಕಾರಿಗಳ ಸಂಘದಲ್ಲಿ ದಿನಾಂಕ 04-02 -2024ರಂದು ಜರುಗಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ, ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು, ತಾವು ಇತ್ತೀಚೆಗೆ ಕೆಂಪಣ್ಣ ಕವಿ ಎಂಬವನ ಯಕ್ಷಗಾನ ಪ್ರಸಂಗ ಸಾಹಿತ್ಯ ಕುರಿತು ಸಂಶೋಧನೆ ಪುಸ್ತಕ ರಚಿಸಿದ್ದನ್ನು ಪ್ರಸ್ತಾಪಿಸಿ, ಕಾವ್ಯವು ಹೇಗೆ ದೃಶ್ಯ ಮತ್ತು ಶ್ರವ್ಯ ಕಾವ್ಯವಾಗಿ ಆಯಾಮ ಪಡೆದುಕೊಂಡಿದೆ ಹಾಗೂ ಅದಕ್ಕೆ ಯಕ್ಷಗಾನದ ಕೊಡುಗೆಯೇನು?; ಯಕ್ಷಗಾನ- ತಾಳಮದ್ದಲೆ ಹೇಗೆ ಜನಮಾನಸವನ್ನು ವ್ಯಾಪಿಸಿದೆ ಎಂಬುದನ್ನು ವಿವರಿಸಿ, ಯಕ್ಷಗಾನ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಲಾಂಛನವಾಗುವ ಅಗತ್ಯವಿದೆಯೆ0ದು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ಕಲಾವಿದೆಯರಾದ ಸುಮಾ ಹೆಗಡೆ ಗಡಿಗೆಹೊಳೆ, ಡಾ.ವಿಜಯನಳಿನಿ ರಮೇಶ ಶಿರಸಿ, ನಿರ್ಮಲಾ ಹೆಗಡೆ ಗೋಳಿಕೊಪ್ಪ ಹಾಗೂ ಭವಾನಿ ಭಟ್ಟ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಶ್ರೀ ದಿವಾಕರ ಹೆಗಡೆ, ಕೆರೆಹೊಂಡ ಅವರು ಯಕ್ಷಗಾನ- ತಾಳಮದ್ದಳೆ ನಡೆದು ಬಂದ ದಾರಿಯ ಕುರಿತು ಪ್ರಸ್ತಾಪಿಸಿ, ಸನ್ಮಾನಿತ ಕಲಾವಿದೆಯರ ಸಾಧನೆ ಪಟ್ಟಿ ಮಾಡಿ ಅಭಿನಂದನಾ ನುಡಿ ಸಲ್ಲಿಸಿದರು. ಸನ್ಮಾನಿತರ ಪರವಾಗಿ ಡಾ. ವಿಜಯನಳಿನಿ ರಮೇಶ ಅವರು ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಮಟ್ಟು ಕುರಿತು ತಿಳಿಸಿ, ಅಭಿನಂದಿಸಿದ್ದಕ್ಕೆ ಕತಜ್ಞತೆ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶ್ರೇಷ್ಠ ಸಾಹಿತಿ ಶ್ರೀಮತಿ ರಜನಿ ಬಾಲಸುಬ್ರಹ್ಮಣ್ಯ ಅವರು ಸಾಹಿತ್ಯ, ಕಲೆ ಕುರಿತು ಮಾತನಾಡಿ ಇಂತಹ ಕಾರ್ಯಕ್ರಮಗಳು ಕಲಾವಿದರಿಗೆ ಪ್ರೇರಣಾದಾಯಕ ಎಂದು ನುಡಿದರು.
ನಂತರ ನಡೆದ ‘ಸೀತಾ ಪರಿತ್ಯಾಗ’ ತಾಳಮದ್ದಲೆ ಕಾರ್ಯಕ್ರಮ ಜನಮನ ಸೂರೆಗೊ0ಡಿತು. ಹಿಮ್ಮೇಳದಲ್ಲಿ : ಕುಮಾರಿ ಚಿತ್ಕಲಾ ಕೆ. ತುಂಗಾ ಅವರ ಮಧುರ ಕಂಠ, ಕುಮಾರ್ ಚಿನ್ಮಯ ಹೆಗಡೆ ಅಂಬಾರಗೋಡ್ಲು ಅವರ ಸಮರ್ಥ ಮದ್ದಳೆ ವಾದನ ಮೆರಗು ನೀಡಿತು. ಮುಮ್ಮೇಳದಲ್ಲಿ : ಶ್ರೀಮತಿಯರಾದ ಡಾ. ವಿಜಯನಳಿನಿ ರಮೇಶ ಇವರು ಸೇವಕನ ಪಾತ್ರವನ್ನೂ, ನಿರ್ಮಲಾ ಹೆಗಡೆ ಗೋಳಿಕೊಪ್ಪ ಸೀತೆಯ ಪಾತ್ರದಲ್ಲೂ, ಸುಮಾ ಹೆಗಡೆ ಗಡಿಗೆಹೊಳೆ ಶ್ರೀರಾಮನಾಗಿ ಹಾಗೂ ಭವಾನಿ ಭಟ್ಟ ಶಿರಸಿ ಲಕ್ಷ್ಮಣನ ಪಾತ್ರವನ್ನೂ ಸೊಗಸಾಗಿ ನಿರ್ವಹಿಸಿ ತಮ್ಮ ಅರ್ಥಗಾರಿಕೆಯಲ್ಲಿ ಪ್ರೌಢಿಮೆ ಮೆರೆದರು. ಈ ಸಂದರ್ಭದಲ್ಲಿ ನಿವೃತ್ತ ಆರ್ಥಿಕ ಸಲಹೆಗಾರ, ಲೆಕ್ಕಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ಕೆ. ರಾಮಚಂದ್ರ ರೆಡ್ಡಿ, ಪೂರ್ಣಿಮಾ ಗೋಪಾಲ, ಭವ್ಯಾ ಎ. ಗೀತಾ ಸಭಾಹಿತ, ವಾಸುದೇವ ಕಾರಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು.