ಶಿರಸಿ : ಬೆಂಗಳೂರಿನ ಆನಂದ ರಾವ್ ವೃತ್ತದ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ವಿಶ್ವಾಭಿಗಮನಮ್ ಯಕ್ಷನೃತ್ಯ, ಸಾಹಿತಿ ಪ್ರಸಂಗಕರ್ತ ದಿನೇಶ ಉಪ್ಪೂರ ಇವರಿಗೆ ಸನ್ಮಾನ ಮತ್ತು ‘ಯಕ್ಷಗಾನ ಶಾಸ್ತ್ರೀಯವೇ’ ಕುರಿತ ಸಂವಾದ ಕಾರ್ಯಕ್ರಮವು ದಿನಾಂಕ 12 ಜುಲೈ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಅಂಕಣಕಾರ ರಾಜು ಅಡಕಳ್ಳಿ “ದಶರೂಪಗಳ ದಶಾವತಾರ ಕೃತಿಯನ್ನು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಇವರು ಹತ್ತು ವರ್ಷಗಳ ಸತತ ಅಧ್ಯಯನ, ಪರಿಕ್ರಮದಿಂದ ರಚಿಸಿದ್ದಾರೆ: ಯಕ್ಷಗಾನಕ್ಕೆ ಇದೊಂದು ಆಕರ ಗ್ರಂಥ. ಈ ಕೃತಿ ಡಾಕ್ಟರೇಟ್ ಪಡೆಯಲು ಅರ್ಹವಾದ ಕೃತಿ. ಅಶೋಕ ಹಾಸ್ಯಗಾರ ಇವರು ಸ್ವಚ್ಛ, ಪ್ರಾಮಾಣಿಕ, ಬದ್ದತೆಯುಳ್ಳ, ಸಂಪಾದಕರಾಗಿದ್ದರು. ಅವರ ಈ ಕೃತಿಗೆ ಸಮ್ಮಾನ ಕೂಡ ದೊರೆತಿರುವುದು ಸಂತಸದ ವಿಷಯ. ಇಂತಹ ಸಂವಾದ ಕಾರ್ಯಕ್ರಮ ಏರ್ಪಡಿಸುವುದು ಸ್ತುತ್ಯಾರ್ಹ” ಎಂದು ಅಭಿಪ್ರಾಯಪಟ್ಟರು.
ದಿನೇಶ ಉಪ್ಪೂರ ಇವರನ್ನು ಸನ್ಮಾನಿಸಿದ ಗಿಂಡಿಮನೆ ಮೃತ್ಯುಂಜಯ ಇವರು ಮಾತನಾಡಿ ದಿನೇಶ ಉಪ್ಪೂರ ಇವರ ಪ್ರಸಂಗ ಸಾಹಿತ್ಯದಲ್ಲಿಯ ಭಂದಸ್ಸು, ಮಟ್ಟು, ರಸಗಳ ಕುರಿತು ವಿವರವಾಗಿ ತಿಳಿಸಿದರು. ಅವರ ಹಲವಾರು ಯಕ್ಷಗಾನ ಪ್ರಸಂಗಗಳಲ್ಲಿ ಚಂದ್ರನಖಿ ಪ್ರಸಂಗವನ್ನು ವಿಶೇಷವಾಗಿ ಪ್ರಸ್ತಾಪಿಸಿ, ಅಪರೂಪದ ರಾಗಗಳಾದ ಮೇಷಾಳೆ, ಹುಸೇನಿಗಳಂತಹ ರಾಗಗಳನ್ನು ಬಳಸಿ ಪ್ರಸಂಗ ರಚಿಸಿದ ಅವರ ಪಾಂಡಿತ್ಯವನ್ನು ಕೊಂಡಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ ಉಪಾಧ್ಯ ಮಾತನಾಡಿ, ಸಾವಿರಾರು ಯಕ್ಷಗಾನ ತಾಳಮದ್ದಳೆಗಳ ಆಡಿಯೋ ವೀಡಿಯೋಗಳನ್ನು ಸಂರಕ್ಷಿಸಿ ಡಿಜಿಟೈಸ್ ಮಾಡಿದ ದಿನೇಶ ಉಪ್ಪೂರ ಅವರ ಸಾಹಸ ಕಾರ್ಯ ಯಾವ ವಿಶ್ವವಿದ್ಯಾಲಯ, ಅಕಾಡೆಮಿಯೂ ಮಾಡದ ಕೆಲಸವಾಗಿದೆ ಎಂದು ಯಕ್ಷಗಾನಕ್ಕಾಗಿ ಜೀವನ ಮುಡುಪಾಗಿಸಿದ ಅವರ ಶ್ರಮವನ್ನು ಕೊಂಡಾಡಿದರು.
ನಂತರ ನಡೆದ ‘ಯಕ್ಷಗಾನ ಶಾಸ್ತ್ರೀಯವೇ’ ಸಂವಾದ ಕಾರ್ಯಕ್ರಮದಲ್ಲಿ ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅವರು ಯಕ್ಷಗಾನದ ಅಂಗಗಳಾದ ಚೌಕಿಮನೆ, ಸಭಾ ಲಕ್ಷ್ಮಣ, ನಾಟಕ, ಪ್ರಕರಣ, ಅಂಕ, ಪ್ರಹಸನ, ವ್ಯಾಯೋಗ, ಸಮವಕಾರ ಮುಂತಾದವುಗಳ ಕುರಿತು, ಅವುಗಳ ಶಾಸ್ತ್ರೀಯತೆಯ ಕುರಿತು ವಿಶ್ಲೇಷಿಸಿ, ಆಧಾರಯುತವಾಗಿ ವಿವರಿಸಿ, ಯಕ್ಷಗಾನ ಶಾಸ್ತ್ರೀಯವೇ ಹೌದು ಎಂಬುದನ್ನು ನಿರೂಪಿಸಿದರು. ಸಂವಾದದಲ್ಲಿ ಭಾಗಿಯಾಗಿದ್ದ ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ ಉಪಾಧ್ಯ, ರವಿ ಮಡೋಡಿ, ಡಾ. ಪಿ.ಕೆ. ದೀಕ್ಷಿತ್ ಮುಂತಾದವರ ಸಂದೇಹಗಳಿಗೆ ನಿಖರವಾದ ಉತ್ತರವನ್ನು ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ತುಳಸಿ ಹೆಗಡೆಯವರಿಂದ ಪ್ರಸ್ತುತಪಡಿಸಲಾದ ವಿಶ್ವಶಾಂತಿ ಸಂದೇಶದ ವಿಶ್ವಾಭಿಗಮನಮ್ ಪ್ರಸ್ತುತಿಯು ಸಭಿಕರಿಗೆ ಅಪಾರ ಸಂತೋಷವನ್ನು ನೀಡಿತು. ಕಾರ್ಯಕ್ರಮದಲ್ಲಿ ಪ್ರಸಂಗಕರ್ತ ಸಾಹಿತಿ ನಿವೃತ್ತ ಲೆಕ್ಕಾಧಿಕಾರಿ ದಿನೇಶ್ ಉಪ್ಪೂರ ಹಾಗೂ ಅಶೋಕ ಹಾಸ್ಯಗಾರ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ದಿನೇಶ ಉಪ್ಪೂರ ಅವರು ಮಾತನಾಡುತ್ತಾ ದಾಖಲೆಗಳ ಸಂಗ್ರಹಕ್ಕಾಗಿ ಅವರು ಪಡುತ್ತಿರುವ ಶ್ರಮ ವಿವರಿಸಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಅಮರಾ ಕಾವ್ಯನಾಮದ ಅಣೆಕಟ್ಟು ಮಧುಸೂದನ್ ರಾವ್ ನಿರೂಪಿಸಿದರು. ಎಲ್.ಎನ್. ಹೆಗಡೆ, ಸುಜಯ ನಾಗರಾಜ, ಟಿ. ಶ್ರೀಧರ್, ವಿಘ್ನೇಶ್ವರ ಶಾಸ್ತ್ರಿ ಗೌರವಾರ್ಪಣೆ ಸಲ್ಲಿಸಿದರು.