ಮಂಗಳೂರು : ಉರ್ವ ಯಕ್ಷಾರಾಧನಾ ಕಲಾಕೆಂದ್ರದ 15ನೇ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ದಿನಾಂಕ 13-07-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸ್ಮಾರಕ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಇವರು “ಯಕ್ಷಗಾನವೂ ಒಂದು ಕಾವ್ಯವೇ. ‘ಯಕ್ಷಗಾನ’ ದೃಶ್ಯಕಾವ್ಯವಾದರೆ, ಶ್ರವ್ಯ ಕಾವ್ಯವನ್ನು ‘ತಾಳಮದ್ದಲೆ’ಯಲ್ಲಿ ಕಾಣಬಹುದು. ಹಾಸ್ಯ ಬಂದಾಗ ನಗುವ, ದುಃಖದ ಪ್ರಸಂಗ ಬಂದಾಗ ಅಳುವ, ರಾಮನಂತಹ ಪಾತ್ರದ ಉದಾತ್ತ ಗುಣಗಳನ್ನು ಕೇಳುವಾಗ ನಮ್ಮಲ್ಲೂ ಅದನ್ನು ಅಳವಡಿಸಬೇಕು ಎನ್ನುವ ಭಾವನೆ ಮೂಡುತ್ತದೆ. ಈ ಎಲ್ಲವೂ ಇರುವ ವಿಶಿಷ್ಟ ಪರಿಕಲ್ಪನೆಯನ್ನು ಯಕ್ಷಗಾನದ ಮೂಲಕ ಮಾಡಿಕೊಟ್ಟಿದ್ದಾರೆ. ಯಕ್ಷಗಾನ ಬುದ್ಧಿವಂತರ ಕಲೆ. ಪ್ರತಿಭಾ ಸಂಪನ್ನನಾಗಿದ್ದರೆ ಮಾತ್ರ ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ರಂಗದಲ್ಲೇ ನೃತ್ಯ, ಅಭಿನಯ, ಮಾತುಗಾರಿಕೆ ಮಾಡಬೇಕಾದ ಬುದ್ಧಿ ಸಂಪನ್ನತೆ ಇರಬೇಕು. ಜತೆಗೆ ಯಕ್ಷಗಾನವನ್ನು ಆಸ್ವಾದಿಸಲು ಒಳ್ಳೆಯ ಪ್ರೇಕ್ಷಕರು ಬೇಕು. ಇದರಿಂದ ನೂರ್ಕಾಲ ಯಕ್ಷಗಾನ ಉಳಿಯಲು ಸಾಧ್ಯ. ಆಗ ಮಾತ್ರ ನಿಜವಾದ ಆರಾಧನೆ ಆಗುತ್ತದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರಿಗೆ ‘ಯಕ್ಷಕಲಾರಾಧಕ ಪ್ರಶಸ್ತಿ-2024’ ಹಾಗೂ ಯಕ್ಷಗುರು ರಾಕೇಶ್ ರೈ ಅಡ್ಕರವರಿಗೆ ‘ಯಕ್ಷ ಶಿಕ್ಷಣ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಕಲಾವಿದ, ಉಪನ್ಯಾಸಕ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಅಭಿನಂದನಾ ಭಾಷಣ ಮಾಡಿದರು. ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಬಸ್ ಮಾಲಕ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಕೇಂದ್ರದ ಟ್ರಸ್ಟಿಗಳಾದ ರತ್ನಾಕರ ರಾವ್, ಮೃದುಲಾ ಹೊಳ್ಳ, ಸದಸ್ಯರಾದ ಶೈಲಜಾ ಜಗತಾಪ್, ಶಶಿರಾಜ ರಾವ್ ಕಾವೂರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚೇತನಾ ಸನ್ಮಾನ ಪತ್ರ ವಾಚಿಸಿ, ಸುಮಾಡ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ ರಾವ್ ಶಿಷ್ಯ ವೃಂದದಿಂದ ಕವಿ ಅಗರಿ ಶ್ರೀನಿವಾಸ ಭಾಗವತರ ‘ಶ್ರೀ ದೇವಿ ಮಹಾತ್ಮ್ಯೆ’ ಯಕ್ಷಗಾನ ಪ್ರದರ್ಶನಗೊಂಡಿತು.