ಮೂಡುಬಿದಿರೆ : ಕನ್ನಡ ಭವನದಲ್ಲಿ ‘ಕುರಲ್ ಕಲಾವಿದೆರ್ ಬೆದ್ರ’ ಅಭಿನಯದ ಪ್ರಸಾದ್ ಆಳ್ವ ಸಾರಥ್ಯದ ‘ಯೇರ್’ ತುಳು ನಾಟಕದ ಪ್ರಥಮ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 04 ಆಗಸ್ಟ್ 2024ರಂದು ನಡೆಯಿತು.
ಈ ಸಮಾರಂಭವನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಇವರು ಮಾತನಾಡಿ “ತುಳು ನಾಟಕ, ಸಿನಿಮಾ, ಯಕ್ಷಗಾನ ಸೇರಿದಂತೆ ಜಿಲ್ಲೆಯ ವೈವಿಧ್ಯ ಕಲಾ ಪ್ರಕಾರಗಳಿಂದ ತುಳು ಭಾಷೆಯ ಮೇಲಿನ ಗೌರವ ಹೆಚ್ಚಿದೆ. 1933ರಲ್ಲಿ ಪ್ರದರ್ಶನಗೊಂಡ ‘ಮದ್ಮೆ’ ತುಳು ನಾಟಕದಿಂದ ಆರಂಭಗೊಂಡು ಇತ್ತೀಚಿನವರೆಗೆ ಸಾಕಷ್ಟು ತುಳು ನಾಟಕಗಳು ಜಿಲ್ಲೆಯಲ್ಲಿ ಪ್ರದರ್ಶನಗೊಂಡಿವೆ. ದೊಡ್ಡಣ್ಣ ಶೆಟ್ಟಿ, ಸಂಜೀವ ದಂಡಕೇರಿಯಂತಹ ಪ್ರಬುದ್ಧ ಕಲಾವಿದರ ಪ್ರಯತ್ನದಿಂದ ತುಳು ನಾಟಕಗಳು ಮೇಲ್ದರ್ಜೆಗೇರಿದವು. ವಿಜಯ ಕುಮಾರ್ ಕೊಡಿಯಾಲ್ ಬೈಲು, ದೇವದಾಸ್ ಕಾಪಿಕಾಡು ಇನ್ನಿತರ ಕಲಾವಿದರು, ವಿವಿಧ ನಾಟಕ ತಂಡಗಳು ತುಳು ನಾಟಕಗಳಿಗೆ ಹೊಸ ರೂಪ ಕೊಟ್ಟು ಬೆಳೆಸಿರುವುದು ತುಳು ನಾಡಿಗೆ ಹೆಮ್ಮೆ” ಎಂದು ಹೇಳಿದರು.
ಉದ್ಯಮಿ ಶ್ರೀಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಚೌಟರ ಅರಮನೆಯ ಕುಲದೀಪ್ ಎಂ., ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಎಂ.ಸಿ.ಎಸ್. ಸೊಸೈಟಿ ಸಿ.ಇ.ಒ. ಚಂದ್ರಶೇಖರ್, ರಕ್ಷಿತ್ ಜೈನ್, ಬ್ಯಾಂಕ್ ಉದ್ಯೋಗಿ ಜನಾರ್ದನ ಶೇರಿಗಾರ್, ರಂಗಭೂಮಿ ಕಲಾವಿದ ಶಿವಪ್ರಕಾಶ್ ಪೂಂಜಾ ಹರೇಕಳ, ನಡ್ಯೋಡಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಗಣೇಶ್ ಬಿ. ಅಳಿಯೂರು ಸ್ವಾಗತಿಸಿ, ಶ್ರೀನಿಧಿ ಶೆಟ್ಟಿ ನಿರೂಪಿಸಿ, ತಂಡದ ವ್ಯವಸ್ಥಾಪಕಿ ಬಾಲಿಕ ಜೈನ್ ವಂದಿಸಿದರು.