ಬೆಂಗಳೂರು : ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯ (ಡ್ರಿಮ್ಡ್ ಟು ಬಿ ಯೂನಿವರ್ಸಿಟಿ) ಕನ್ನಡ ಸಂಘ ಏರ್ಪಡಿಸಿದ ಡಾ. ದ.ರಾ. ಬೇಂದ್ರೆ ಸ್ಮೃತಿ ಅಂತರ ಕಾಲೇಜು ಕವನ ಸ್ಪರ್ಧೆ – 42 ಮತ್ತು ಡಾ. ಅ.ನ.ಕೃ ಸ್ಮಾರಕ ಅಂತರ ಕಾಲೇಜು ಕಥಾ ಸ್ಪರ್ಧೆ – 15 ಎರಡೂ ವಿಭಾಗದಲ್ಲಿ ಯುವ ಕವಯತ್ರಿ ಮಧು ಕಾರಗಿ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕೆರವಡಿ ಗ್ರಾಮದ ನಿವಾಸಿ ವೀರಪ್ಪ ಮತ್ತು ಮಂಜುಳಾ ದಂಪತಿಯ ಪುತ್ರಿಯಾಗಿರುವ ಮಧು ಕಾರಗಿಯವರು ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಡಾ. ಎಂ. ಚಿದಾನಂದಮೂರ್ತಿ ಕನ್ನಡ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ. ಆರ್. ರೂಪೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ. ‘ಕನಸುಗಳ ಚೀಲ’ ಮತ್ತು ‘ತೆರೆಯದ ಬಾಗಿಲು’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಜ್ಯೋತಿ ಪುರಸ್ಕಾರ, ಪುನೀತ್ ರಾಜಕುಮಾರ್ ಸಾಹಿತ್ಯ ದತ್ತಿ ಪುರಸ್ಕಾರ, ಡಿ.ಎಸ್. ಕರ್ಕಿ ಕಾವ್ಯ ಪುರಸ್ಕಾರ ಮತ್ತು ಚೆನ್ನವೀರ ಕಣವಿ ಕಾವ್ಯ ಬಹುಮಾನಗಳು ಸಂದಿವೆ.
