ಮೂಡುಬಿದಿರೆ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಮೂಡುಬಿದಿರೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 20-02-2024ರ ಮಂಗಳವಾರದಂದು ಮೂದಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ “ಕನ್ನಡ ಮಾಧ್ಯಮ ಶಾಲೆಗಳು ಸೋಲುವುದೆಂದರೆ ಅದು ಶ್ರೀ ಸಾಮಾನ್ಯನ ಸೋಲಾಗುತ್ತದೆ. ಕೇವಲ ಭಾವನಾತ್ಮಕವಾಗಿ ಮಾತನಾಡಿದರೆ ಸಾಲದು. ಸರ್ಕಾರ ಹಾಗೂ ಇಲಾಖೆ ಕನಿಷ್ಠ ತರಗತಿಗೊಂದು ಶಿಕ್ಷಕರನ್ನೂ ನೀಡಲಾಗದಿದ್ದರೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಹೇಗೆ ಸಾಧ್ಯ?. ನಾಡಿನಲ್ಲಿ ಶಿಕ್ಷಣ ವ್ಯವಸ್ಥೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಹೀನಾಯ ಪರಿಸ್ಥಿತಿಗೆ ಸರಕಾರವೇ ನೇರ ಹೊಣೆ ಎಂದು ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ ರಂಗಕರ್ಮಿ ಹಾಗೂ ನಟ ಶ್ರೀಪತಿ ಮಂಜನಬೈಲು ಮಾತನಾಡಿ “ಜಾಗತೀಕರಣದ ಫಲವಾಗಿ ಇಂಗ್ಲಿಷ್ ಎಲ್ಲೆಡೆ ವ್ಯಾಪಿಸಿ ಅಡುಗೆ ಮನೆವರೆಗೂ ವ್ಯಾಪಿಸಿದೆ. ಮುಖ್ಯವಾಗಿ ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು.” ಎಂದು ಹೇಳಿದರು.
ಶುಭಾಶಂಸನೆಯ ಆಶೀರ್ವಚನ ನೀಡಿದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀ “ ಕನ್ನಡ ನಾಡು ನುಡಿಯ ಕಾಳಜಿಯ ಅಪರೂಪದ ಚಿಂತಕ ಡಾ. ಮೋಹನ ಆಳ್ವ ಅವರನ್ನು ಕನ್ನಡದ ಕಟ್ಟಾಳುವಾಗಿದ್ದ ವಾಟೀಲ ಪುಟ್ಟಪ್ಪರಂತೆ ನಾಡು ನುಡಿ ಅಭಿವೃದ್ಧಿಯ ಕಾರ್ಯ ಮಾಡುವಂತಾಗಬೇಕು.” ಎಂದು ಹಾರೈಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ತಹಸೀಲ್ದಾರ್ ಮುಕುಲ್ ಜೈನ್, ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಎಂ. ಸಿ. ಎಸ್. ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಬೆದ್ರ ತುಳುಕೂಟದ ಅಧ್ಯಕ್ಷ ಧನಕೀರ್ತಿ ಬಲಿಪ, ಅಮರನಾಥ ಶೆಟ್ಟಿ, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷ ದಿನೇಶ್ ಆನಡ್ಕ, ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ್ ಉಡುಪ, ಮೂಡುಬಿದಿರೆ ಕಸಾಪ ಗೌರವ ಕೋಶಾಧ್ಯಕ್ಷ ಅಂಡಾರು ಗುಣಪಾಲ ಹೆಗ್ಡೆ, ಕಾರ್ಯದರ್ಶಿ ಸದಾನಂದ ನಾರಾವಿ, ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು, ಕೆಂದ್ರೀಯ ಕಾರ್ಯಕಾರಿ ಸಮಿತಿಯ ಡಾ. ಮಾಧವ ಎಂ.ಕೆ. ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಉಪಸ್ಥಿತರಿದ್ದರು. ಮೂಡುಬಿದಿರೆ ತಾಲೂಕು ಘಟಕದ ಕಸಾಪ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿ ಸದಸ್ಯ ಎಲ್. ಜೆ. ಫೆರ್ನಾಂಡಿಸ್ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮಮದ ಬಳಿಕ ಮೂಡುಬಿದಿರೆಯ ಗತಕಾಲದ ಹೆಜ್ಜೆಗುರುತುಗಳ ಕುರಿತು ಡಾ. ಪುಂಡಿಕಾಯಿ ಗಣಪಯ್ಯ ಭಟ್, ಮೂಡುಬಿದಿರೆಯ ಸಾಂಸ್ಕೃತಿಕ ಪರಂಪರೆಯ ಕುರಿತು ಡಾ. ಪ್ರಭಾತ್ ಬಲ್ನಾಡ್, ಮೂಡುಬಿದಿರೆಯ ಸಾಹಿತ್ಯ ಪರಂಪರೆಯ ಕುರಿತು ಡಾ.ಎಸ್.ಪಿ. ಅಜಿತ್ ಪ್ರಸಾದ್, ಮಕ್ಕಳ ಸಾಹಿತ್ಯ ಇಂದಿನ ಸವಾಲು ಕುರಿತು ವಿಜಯಶ್ರೀ ಹಾಲಾಡಿ, ಮೂಡುಬಿದಿರೆಯ ಶೈಕ್ಷಣಿಕ ಪರಂಪರೆಯ ಕುರಿತು ಅರವಿಂದ ಚೊಕ್ಕಾಡಿ ವಿಚಾರ ಮಂಡಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.