ಕಾಸರಗೋಡು : ಕಲಾಕುಂಚ ಗಡಿನಾಡ ಘಟಕ ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀಮತಿ ಲಕ್ಷ್ಮೀ ವಿ. ಭಟ್ ಇವರ ‘ಭಕ್ತಿ ಮಂಜರಿ’, ‘ಸುಚರಿತರು’, ‘ಕಲರವ’, ‘ಭಾರತಾಂಬೆಗೆ ನಮನ’ ಮತ್ತು ‘ಭಾವ ಸ್ಪರ್ಶ’ ಎಂಬ ಪಂಚ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 29-08-2023ರಂದು ಕಾಸರಗೋಡು ಜಿಲ್ಲೆಯ ಉಪ್ಪಳದ ಶ್ರೀ ಕ್ಷೇತ್ರ ಕೊಂಡೆವೂರು ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕೊಂಡೆವೂರಿನ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಲೇಖಕಿ ಶ್ರೀಮತಿ ಲಕ್ಷ್ಮೀ ವಿ.ಭಟ್ ಇವರಿಂದ ಆಶಯ ನುಡಿ ಮತ್ತು ಕು. ಅದಿತಿಲಕ್ಷ್ಮೀ ಇವರಿಂದ ಪೂಜಾ ನೃತ್ಯವಿದೆ.
ಶ್ರೀ ಶ್ರೀ ಶ್ರೀ ಗಳವರು ತಮ್ಮ ದಿವ್ಯ ಹಸ್ತಗಳಿಂದ ‘ಭಕ್ತಿ ಮಂಜರಿ’ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಕುರಿತು ಮಾತನಾಡಲಿದ್ದಾರೆ. ಕು. ಸುಪ್ರಜಾ ರಾವ್ ಹಾಗೂ ಶ್ರೀಮತಿ ರಾಧಾಮಣಿ ಆರ್.ರಾವ್ ಕೃತಿಯಲ್ಲಿನ ಕವನಗಳನ್ನು ಹಾಡಲಿದ್ದಾರೆ.
ಶ್ರೀ ಪಿ. ನಾರಾಯಣ ಮೂಡಿತ್ತಾಯ ಇವರು ‘ಸುಚರಿತರು’ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಅವಲೋಕನ ಮಾಡುವರು ಮತ್ತು ಶ್ರೀ ದಿವಾಕರ ಬಲ್ಲಾಳ್ ಮತ್ತು ಶ್ರೀ ಗಣಪತಿ ಭಟ್ ಪೆರ್ಮುಖ ಕೃತಿಯಲ್ಲಿನ ಹಾಡುಗಳ ಗಾಯನ ಮಾಡಲಿದ್ದಾರೆ.
ಶ್ರೀ ವಿ.ಬಿ.ಕುಳಮರ್ವ ಇವರು ‘ಕಲರವ’ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಅವಲೋಕನ ಮಾಡಲಿದ್ದಾರೆ ಮತ್ತು ಚಿ. ದೇವಾಂಶು ಕಾರಂತ್, ಚಿ. ವೇದಾಂತ ಕಾರಂತ್, ಕು. ಪ್ರಾರ್ಥನಾ ಅಡಿಗ, ಕು. ಕೀರ್ತನ ಅಡಿಗ ಕೃತಿಯಲ್ಲಿನ ಹಾಡುಗಳಿಂದ ಪ್ರೇಕ್ಷಕರ ಮನಕ್ಕೆ ಮುದ ನೀಡಲಿದ್ದಾರೆ.
ಶ್ರೀಮತಿ ಮೀನಾಕ್ಷಿ ರಾಮಚಂದ್ರ ಇವರು ‘ಭಾರತಾಂಬೆಗೆ ನಮನ’ ಲೋಕಾರ್ಪಣೆ ಮಾಡಿ ಕೃತಿ ಅವಲೋಕನ ಮಾಡುವರು ಮತ್ತು ಶ್ರೀಮತಿ ರಾಧಾಮಣಿ ಆರ್. ರಾವ್ ಮತ್ತು ಶ್ರೀಮತಿ ರೂಪಶ್ರೀ ಬಲ್ಲಾಳ್ ಕೃತಿಯಲ್ಲಿನ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
‘ಭಾವ ಸ್ಪರ್ಶ’ ಕೃತಿಯನ್ನು ಡಾ. ಸುರೇಶ ನೆಗಳಗುಳಿಯವರು ಬಿಡುಗಡೆ ಮಾಡಿ ಕೃತಿ ಅವಲೋಕನ ಮಾಡಲಿದ್ದಾರೆ ಮತ್ತು ಶ್ರೀ ಗಣಪತಿ ಭಟ್ ಪೆರ್ಮುಖ ಮತ್ತು ಶ್ರೀಮತಿ ದಿವ್ಯಾ ಕಾರಂತ್ ಭಾವ ಸ್ಪರ್ಶದ ಗಜಲ್ ಗಳ ಸವಿಯನ್ನು ಪ್ರೇಕ್ಷಕರಿಗೆ ನೀಡಲಿದ್ದಾರೆ.
ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನಿರೂಪಣೆ ಶ್ರೀ ದಿವಾಕರ ಬಲ್ಲಾಳ್, ಸ್ವಾಗತ ಕಲಾಕುಂಚ ಘಟಕದ ಅಧ್ಯಕ್ಷೆಯಾದ ಶ್ರೀಮತಿ ಜಯಲಕ್ಷ್ಮಿ ಕಾರಂತ ಹಾಗೂ ಶ್ರೀ ಯೋಗೀಶ್ ರಾವ್ ಚಿಗುರುಪಾದೆ ಧನ್ಯವಾದ ಸಮರ್ಪಣೆ ಮಾಡಲಿದ್ದಾರೆ.