ಬಾಗಲಕೋಟೆ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ವಚನ ವೈಭವ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘ (ರಿ.) ಬಾಗಲಕೋಟೆ ಇವುಗಳ ಸಹಯೋಗದಲ್ಲಿ ‘ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ – 2025’ವನ್ನು ದಿನಾಂಕ 25 ಜನವರಿ 2025ರಂದು ಮಧ್ಯಾಹ್ನ 2-00 ಗಂಟೆಗೆ ಬಾಗಲಕೋಟೆಯ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ವಿಶೇಷ ಉಪನ್ಯಾಸ, ಕವಿಗೋಷ್ಠಿ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದೆ ಶ್ರೀಮತಿ ಗುರಮ್ಮ ಸಂಕಿನಮಠ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ಗುರು ಚನ್ನಬಸವೇಶ್ವರ ಹಿರೇಮಠ ಕಮತಗಿಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಿರಿಯ ಜನಪದ ಗಾಯಕರಾದ ಶ್ರೀ ಗುರುರಾಜ್ ಹೊಸಕೋಟೆ ಇವರು ಈ ಸಮ್ಮೇಳನವನ್ನು ಉದ್ಘಟಿಸಲಿರುವರು. ಶ್ರೀಮತಿ ಜಯಶ್ರೀ ಭಂಡಾರಿಯವರ ‘ಸಂಸ್ಕೃತಿಯ ಚಿಂತಕರು’ ಲೇಖನಗಳ ಸಂಕಲನ, ಶ್ರೀ ಹುಸೇನ್ ಪತ್ತೆಖಾನ್ ಇವರ ‘ಬಾಳ ಶಾಣ್ಯಾಕಿ’ ಕವನ ಸಂಕಲನ ಮತ್ತು ಶ್ರೀ ಶಿವಾನಂದ ಆದಾಪೂರ ಇವರ ಮೌನ ಕ್ರಾಂತಿ’ ಕವನ ಸಂಕಲನ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ‘ಜನಪದ ಸಾಹಿತ್ಯದಲ್ಲಿ ಮಹಿಳೆ’ ಎಂಬ ವಿಷಯದ ಬಗ್ಗೆ ಸಾಹಿತಿ ಶ್ರೀಮತಿ ದಾಕ್ಷಯಣಿ ಮಂಡಿ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸಾಹಿತಿ ಡಾ. ಪ್ರಕಾಶ ಗ. ಖಾಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಸುನೀಲ ಪಾಟೀಲ, ಕವಿತಾ ಹಿರೇಮಠ, ವಿಕ್ರಮ್ ಬಸನಗೌಡ, ಸವಿತಾ ಪಾಟೀಲ, ರೇಖಾ ಗೂಗಿ, ಹೆಚ್.ಎಸ್. ಕಾಳೆ, ರಾಜೇಶ್ವರಿ ಸೂಳಿಕೇರಿ, ಶಿವಾನಂದ ಆದಾಪೂರ, ರಾಜು ಯಾದವ, ಮಹಾಂತೇಶ ಕರಬಶೆಟ್ಟರ, ಬಾಲಾಜಿ ಮಂಕಣಿ, ಅನಿತಾ ಪಾಟೀಲ, ರಾಜಶೇಖರ ಯಲ್ಲಣ್ಣವರ ಮುಂತಾದ ಕವಿಗಳು ಭಾಗವಹಿಸಲಿದ್ದಾರೆ. ಶ್ರೀ ಜ್ಞಾನಸಿಂಧು ಕಲಾ ತಂಡ ಗುಳೇದಗುಡ್ಡ, ಶ್ರೀ ವೀರಭದ್ರೇಶ್ವರ ಸಾಂಬಾಳ ವಾದ್ಯ ಕಮತಗಿ, ಶ್ರೀ ರಾಮಾನಂದ ಭಜನಾ ಮಂಡಳಿ ಕಗಲಗೊಂಬ, ಶ್ರೀ ಬಸವೇಶ್ವರ ಕರಡಿ ಮಜಲು ತಿಮಸಾಗರ, ಸೊಬಾನೇ ಪದ ಅವ್ವನ ಬಳಗ ಕಮತಗಿ, ಶ್ರೀ ಬಸವರಾಜ ಸಿಂದಗಿಮಠ ಮತ್ತು ಕು. ವೈಷ್ಣವಿ ಗೂಳಿ ತಂಡ, ಜೈ ಸೇವಾಲಾಲ್ ಕಲಾ ತಂಡ ಹಾನಾಪುರ ಎಸ್.ಪಿ. ತಾಂಡಾ ಮತ್ತು ಭರತನಾಟ್ಯ ಕು. ಶ್ರೇಯಾ ಚಿನ್ನಕರ ಕು. ಸತ್ವಿಕಾ ಗೂಗಿ ಮುಂತಾದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.