ಮೂಡುಬಿದಿರೆ : ದ.ಕ. ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವುಗಳ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯುವ ‘ಮೈಸೂರು ವಿಭಾಗ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರ’ ದಿನಾಂಕ 02-11-2023 ರ ಗುರುವಾರದಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೈಸೂರು ವಿಭಾಗದ ಆರೋಗ್ಯ, ಕುಟುಂಬ ಕಲ್ಯಾಣ ಸೇವೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ| ರಾಜೇಶ್ವರಿ ದೇವಿ “ಆಧುನಿಕತೆಯ ಬಿರುಗಾಳಿಯಲ್ಲಿ ಜಾನಪದ ಕಲೆಗಳು ಎಲ್ಲೋ ಸಾಗುತ್ತಿವೆ. ಆದರೆ ದ.ಕ., ಉಡುಪಿ ಜಿಲ್ಲೆಯ ಮಣ್ಣಿನ ಗಟ್ಟಿತನದಿಂದಾಗಿ 5 ಸಾವಿರ ವರ್ಷಗಳಿಂದಲೂ ಇಲ್ಲಿಯ ಜಾನಪದ ಕಲೆಗಳು ಜೀವಂತವಾಗಿವೆ. ಸಿನೆಮಾದ ಮೂಲಕ ಜಾನಪದ ಕಲೆಗಳನ್ನು ಜೀವಂತವಾಗಿ ಉಳಿಸುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು.
ವಿದ್ಯಾಗಿರಿಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ವಹಿಸಿದ್ದರು. ಬೆಂಗಳೂರು ಆರೋಗ್ಯ ಸೌಧ ಆ.ಕು.ಕ.ಸೇವೆಗಳ ಉಪ ನಿರ್ದೇಶಕ ಡಾ.ಧನಂಜಯ ಟಿ.ಎನ್., ಮೈಸೂರು ವಿಭಾಗೀಯ ಉಪನಿರ್ದೇಶಕಿ ಡಾ. ಮಲ್ಲಿಕಾ, ದ.ಕ.ಜಿಲ್ಲಾ ತರಬೇತಿ ಸಂಸ್ಥೆ ಸುರತ್ಕಲ್‌ನ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್, ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂ. ಆರ್. ದುರ್ಗಾಪ್ರಸಾದ್ ಹಾಗೂ ಬೆಂಗಳೂರು ಆ. ಸೌಧದ ಆ. ಶಿಕ್ಷಣಾಧಿಕಾರಿ ಜ್ಞಾನೇಶ್ವರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣ ಪ್ರಸಾದ್, ನಾಗೇಂದ್ರ ಪ್ರಸಾದ್, ಡಾ.ದೀಪಿಕಾ ಉಪಸ್ಥಿತರಿದ್ದರು. ಜಿ.ಆ. ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಸ್ವಾಗತಿಸಿ, ಮೈಸೂರು ವಿಭಾಗೀಯ ಆ. ಶಿಕ್ಷಣಾಧಿಕಾರಿ ಪ್ರಕಾಶ್ ಪ್ರಸ್ತಾವನೆಗೈದು, ಆಕಾಶವಾಣಿ ಉದ್ಘೋಷಕಿ ಮಲ್ಲಿಕಾ ಶೆಟ್ಟಿ ನಿರೂಪಿಸಿದರು.

