ಉಜಿರೆ: ಜನಪದ ಕಲಾವಿದ, ‘ತುಳು ಸಿರಿ ಕಾವ್ಯದ ಕಣಜ’ ಎಂದೇ ಖ್ಯಾತರಾಗಿದ್ದ ಬೆಳ್ತಂಗಡಿಯ ಬೆಳಾಲು ಗ್ರಾಮದ ಮಾಚಾರು ಗೋಪಾಲ ನಾಯ್ಕ (85) ಅಸೌಖ್ಯದಿಂದ ಸ್ವಗೃಹದಲ್ಲಿ ಏಪ್ರಿಲ್ 24ರಂದು ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.
ಜನಪದ ಕ್ಷೇತ್ರದಲ್ಲಿನ ಅವರ ಸೇವೆಗೆ 2005ರ ‘ರಾಜ್ಯೋತ್ಸವ ಪ್ರಶಸ್ತಿ’ ಅವರಿಗೆ ಸಂದಿತ್ತು. ಸಿರಿ ಸಂಧಿಯಲ್ಲಿರುವ 15,683 ಸಾಲುಗಳ ದೀರ್ಘ ಪಠ್ಯವನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಇತರ ಆರಾಧನಾ ಪದ್ಧತಿಗಳಲ್ಲಿ ಬರುವ ಸಂಧಿ-ಪಾಡ್ಡನಗಳನ್ನು ಹಾಡಿನೊಂದಿಗೆ ವಿವರಣೆಯನ್ನೂ ನೀಡುತ್ತಿದ್ದರು. ಸಿರಿ ಜಾತ್ರೆಗಳಲ್ಲಿ ನಡೆಯುವ ದಲ್ಯ ಆಚರಣೆಗಳಲ್ಲಿ ಅವರ ಸಿರಿ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ. ಜನಪದ ಪುರಾಣಗಳು ಮತ್ತು ಪರಂಪರೆಯ ಕುರಿತು ಅಪಾರ ತಿಳಿವಳಿಕೆ ಹೊಂದಿದ್ದ ಅವರ ಸಿರಿ ಕಾವ್ಯದ ಕಥೆಯ ನಡಿಗೆ, ಅದರ ಕಥೆಗಳನ್ನು ಘಟಕಗಳನ್ನಾಗಿ ವಿಂಗಡಿಸಿ ಮರು ಕಟ್ಟುವ ಕಲೆ, ವರ್ಣನೆಯನ್ನು ಪರಂಪರೆಯಿಂದ ಆಯ್ದು ಅಳವಡಿಸುತ್ತಿದ್ದರು.
ಫಿನ್ಲೆಂಡ್‌ನ ಖ್ಯಾತ ಜನಪದ ವಿದ್ವಾಂಸ ಲೌರಿ ಹೋಂಕೊ ಮತ್ತು ಅನ್ನೆಲಿ ಹೋಂಕೊ 1990ರಲ್ಲಿ ಧರ್ಮಸ್ಥಳಕ್ಕೆ ಬಂದವರು ಆಸಕ್ತಿಯಿಂದ ಗೋಪಾಲ ನಾಯ್ಕರ ಸಂಧಿ-ಪಾಡ್ಡನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಪ್ರೊ. ಬಿ.ಎ. ವಿವೇಕ ರೈ ಹಾಗೂ ಡಾ. ಕೆ. ಚಿನ್ನಪ್ಪ ಗೌಡ ಸಿರಿ ಕಾವ್ಯ ಯೋಜನೆಯಲ್ಲಿ ಸಹಕರಿಸಿದ್ದರು. ಸುಮಾರು 8 ವರ್ಷಗಳ ಅಧ್ಯಯನ ಮತ್ತು ದಾಖಲೀಕರಣದ ಬಳಿಕ ಗೋಪಾಲ ನಾಯ್ಕರಿಂದ ಸಿರಿ ಸಂಧಿಗಳನ್ನು ಹಾಡಿಸಿ ದೀರ್ಘವಾದ ಪಠ್ಯವನ್ನು ಅವರು ದಾಖಲಿಸಿಕೊಂಡಿದ್ದರು. ಸಿರಿ ಕಾವ್ಯ ಪಠ್ಯದ ಎರಡು ಸಂಪುಟಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. ವಿಶ್ವದ ಜಾನಪದ ಲೋಕಕ್ಕೆ ಇದೊಂದು ಅಮೂಲ್ಯ ಕೊಡುಗೆಯಾಗಿದೆ.