ಮಂಗಳೂರು : ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಹಯೋಗದಲ್ಲಿ ‘ಜಾನಪದ ಸ್ಪರ್ಧಾ ಕೂಟ’ವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 11-12-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿ “ತುಳು ಜಾನಪದ ಕಲೆ ಉಳಿಸುವಲ್ಲಿ ಸ್ಪರ್ಧೆಗಳ ಪಾತ್ರ ಮಹತ್ವವಾಗಿದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಲಾವಿದರ ಪಾತ್ರ ಮುಖ್ಯವಾದುದು. ತುಳುನಾಡಿನ ಜನತೆ ಜಾನಪದ ಸಂಸ್ಕೃತಿಯ ಉಳಿವಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ತುಳುನಾಡಿನ ವಿವಿಧ ಜಾನಪದ ಪ್ರಕಾರಗಳು ಕಲಾವಿದರಿಂದಾಗಿ ದೇಶ ವಿದೇಶದಲ್ಲಿ ಪ್ರತಿಬಿಂಬಿಸುತ್ತಿವೆ. ನಮ್ಮ ಕುಟುಂಬ ಪದ್ಧತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆ ಎಂಬ ಮಾನ್ಯತೆ ಸಿಗಬೇಕಾಗಿದೆ” ಎಂದು ಹೇಳಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, “ತುಳುನಾಡಿನ ಆಚಾರ ವಿಚಾರ, ಕಲೆ ಸಂಸ್ಕೃತಿ ವಿಶಿಷ್ಟವಾಗಿದೆ. ದೇಶ ವಿದೇಶಗಳಲ್ಲಿ ತುಳು ಮಾತನಾಡುವ ಜನರಿದ್ದು, ವಿವಿಧ ಭಾಗಗಳಲ್ಲಿ ತುಳು ಸಂಸ್ಕೃತಿಯನ್ನು ಅನಾವರಣ ಮಾಡಲಾಗುತ್ತಿದೆ. ತುಳುವಿನಲ್ಲಿ ಅನೇಕ ಜಾನಪದ ಪ್ರಕಾರಗಳಿದ್ದು ಅವುಗಳನ್ನು ಉಳಿಸಬೇಕು. ತುಳುವಿನ ಕಂಪು ರಾಜ್ಯದೆಲ್ಲೆಡೆ ಪಸರಿಸಬೇಕು. ತುಳು ಸಂಸ್ಕೃತಿ ಬೆಳೆಯಲು ಇಂಥ ಸ್ಪರ್ಧೆ ಪ್ರೇರಣೆಯಾಗಲಿದೆ” ಎಂದರು.
ಅನಿವಾಸಿ ಭಾರತೀಯ ಉದ್ಯಮಿ ಹರೀಶ್ ಶೇರಿಗಾರ್ ಮಾತನಾಡಿ, “ಜಾನಪದದಿಂದಾಗಿ ತುಳು ಭಾಷೆ ಉಳಿದು ಬೆಳೆದಿದೆ. ಕಲಾ ಪ್ರಕಾರಗಳು ಭಾಷೆಯ ಬೆಳವಣಿಗೆಗೆ ಪೂರಕವಾಗಿವೆ. ವಿದೇಶಗಳಲ್ಲೂ ತುಳುನಾಡಿನ ಜನತೆ ತುಳು ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ತುಳು ಉಳಿವಿಗೆ ನಾವೆಲ್ಲರು ಒಂದಾಗಬೇಕಾಗಿದೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಡೆದ ‘ಜಾನಪದ ಸ್ಪರ್ಧಾ ಕೂಟ’ದಲ್ಲಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ‘ತುಡರ್’ ತಂಡ ಪ್ರಥಮ ಸ್ಥಾನ, ಕಾಸರಗೋಡಿನ ‘ಬೊಳ್ಳಿಕೆ ಜಾನಪದ ಸಂಘ’ ದ್ವಿತೀಯ ಸ್ಥಾನ ಮತ್ತು ಪುತ್ತೂರಿನ ಪ್ರಗತಿ ಇನ್ ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸಸ್‌ನ ಪುತ್ತೂರ್ದ ಐಸಿರಿ ಮತ್ತು ವಿಧಾತ್ರಿ ಕಲಾ ತಂಡ ಕೈಕಂಬ ಕುಡ್ಲ ತೃತೀಯ ಸ್ಥಾನವನ್ನು ಹಂಚಿಕೊಂಡಿದೆ. ಈ ಸ್ಪರ್ಧೆಯು ಪಣಂಬೂರು ಬೀಚ್‌ನಲ್ಲಿ ಫೆಬ್ರುವರಿ 9-11ರವರೆಗೆ ನಡೆಯಲಿರುವ ‘ಜಾನಪದ ಕಡಲೋತ್ಸವ, ಜಾನಪದ ಪ್ರದರ್ಶನ ಮತ್ತು ಆಹಾರ ಮೇಳದ ಪೂರ್ವಯೋಜಿತವಾಗಿದ್ದು ಇದರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ. ಮಾಧವ ಎಂ.ಕೆ., ಪ್ರಮುಖರಾದ ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಜಾನಪದ ನೃತ್ಯ ನಿರ್ದೇಶಕ ಅವಿನಾಶ್ ಕುಮಾರ್, ಮಂಗಳೂರು ತಾಲೂಕು ಘಟಕ ಅಧ್ಯಕ್ಷ ಮೋಹನ್ ದಾಸ್ ರೈ, ಶಿವಪ್ರಸಾದ್ ಕೊಕ್ಕಡ, ಟಿಪೇಶ್ ಅಮೀನ್, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ವಿಜಯ್ ಕುಮಾರ್ ಜೈನ್, ಅಸ್ಗಾರ್ ಮುಡಿಪು, ರಾಜೇಶ್ ಆಳ್ವ, ಡಾ. ಅರುಣ್ ಉಳ್ಳಾಲ, ದಿಶಾ ಆರ್. ದೇವಾಡಿಗ, ಮರಿಯಮ್ಮ ಫೌಜಿಯಾ ಮತ್ತಿತರರು ಉಪಸ್ಥಿತರಿದ್ದರು.