ಮೈಸೂರು : “ಯಾವುದೇ ಯಶಸ್ಸಾದರೂ ಅದು ಕೇವಲ ಶ್ರಮದ ಮೇಲೆ ನಿಂತಿರುತ್ತದೆ” ಎಂದು ಬಲವಾಗಿ ನಂಬಿದವಳು ನಾನು. ಅಂತ ಒಂದು ಯಶಸ್ಸನ್ನು ದಿನಾಂಕ 28 ಡಿಸೆಂಬರ್ 2024ರ ಶನಿವಾರದಂದು ಅಕ್ಷರಶಃ ಅನುಭವಿಸಿದೆ. ‘ಸ್ವರ’ ಮತ್ತು ‘ಧ್ವನಿ’ ಓದುತ್ತಿರುವ ‘ಅರಿವು ವಿದ್ಯಾಸಂಸ್ಥೆ’ಯು ಪ್ರತೀ ವರ್ಷ ಪೋಷಕರು ಹಾಗೂ ಶಿಕ್ಷಕರಿಗಾಗಿ ‘ಅರಿವು ಹಬ್ಬ’ವನ್ನು ಆಚರಿಸುತ್ತದೆ. ಇದರಲ್ಲಿ ಆಸಕ್ತ ಪೋಷಕರು ಭಾಗವಹಿಸಬಹುದು. ಮಗಳ ಒತ್ತಾಯಕ್ಕಾಗಿ ಈ ಬಾರಿ ನಾನು ಭಾಗವಹಿಸಲು ನಿರ್ಧರಿಸಿದೆ. ‘ಕರಾವಳಿ ಜನಪದ ಪ್ರಕಾರ’ಗಳನ್ನು ಪೋಷಕರ ಮೂಲಕ ರಂಗದ ಮೇಲೆ ತರಬೇಕೆಂದು ಆಲೋಚಿಸಿದೆ. ಶಾಲೆಯ ಆಡಳಿತ ಮಂಡಳಿಯು ಇದಕ್ಕೆ ಒಪ್ಪಿತು.
ಕಳೆದ ಒಂದುವರೆ ತಿಂಗಳಿಂದ ಮನೆ, ಮಕ್ಕಳು, ಹೋಟೇಲ್ ಎಲ್ಲವನ್ನೂ ಮರೆತೇ ಬಿಟ್ಟಿದ್ದೆ. ಮೊರ, ಮುಟ್ಟಾಳೆ, ಬೀಸುವ ಕಲ್ಲು, ಒನಕೆ, ಹಸಿರು ಹುಲ್ಲು ಹೀಗೆ ಕಾರಿನ ತುಂಬೆಲ್ಲ ‘ಅರಿವು ಹಬ್ಬ’ದ ಸಂಭ್ರಮವನ್ನು ಕಟ್ಟಿಕೊಂಡು ಓಡಾಡಿದ್ದಾಯಿತು. ಸುಮಾರು 15 ಜನ ಪೋಷಕರ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಜ್ಜಾದರು. ಎಲ್.ಕೆ.ಜಿ.ಯಿಂದ ಹಿಡಿದು 10ನೇ ತರಗತಿಯವರೆಗಿನ ಮಕ್ಕಳ ಪೋಷಕರ ತಂಡವದು. ಯಾರು ಕೂಡ ನೃತ್ಯವನ್ನು ಕಲಿತವರಲ್ಲ. ತುಳು ಭಾಷೆ ಗೊತ್ತಿಲ್ಲ. ಆದರೂ ನಿರಂತರವಾಗಿ ಅರ್ಧ ಗಂಟೆ ತುಳು ಹಾಡುಗಳಿಗೆ ಸುಂದರವಾಗಿ ಹೆಜ್ಜೆಗಳನ್ನು ಹಾಕುವ ಮಟ್ಟಿಗೆ ತಯಾರಾದರು.
ಪೋಷಕರು ಕಲಾವಿದರಾಗಿ ರಂಗದ ಮೇಲೆ ಬಂದು ಯಾವ ವೃತ್ತಿಪರ ಕಲಾವಿದರಿಗೂ ಕಮ್ಮಿ ಇಲ್ಲದಂತೆ ನರ್ತಿಸಿದರು. ನಮ್ಮ ಕಲಾವಿದರು ನಾಟಿ ಹಾಡಿಗಾಗಿ ಸ್ವತಃ ಭತ್ತದ ಪೈರನ್ನು ತಾವೇ ನೆಟ್ಟು ಬೆಳೆಸಿದರು. ಹಣ ಕೊಟ್ಟು ಮುಟ್ಟಾಳೆ ಕೊಂಡುಕೊಂಡರು. ಎರಡು ದಿನ ನಿರಂತರವಾಗಿ ಬೋಗಾದಿ ಹತ್ತಿರದ ತೋಟವೊಂದರಿಂದ ಕಂಗೀಲು ನೃತ್ಯಕ್ಕಾಗಿ ತೆಂಗಿನ ಎಳೆಯ ಗರಿಗಳನ್ನು ಆಯ್ದು ತಂದಿದ್ದಾಯಿತು. ಮೈಗೆ, ಮುಖಕ್ಕೆ ಮುತ್ತಿದ ಕೆಂಜಿಗದ ಇರುವೆಗಳು ಮಾಡಿದ ಗಾಯದ ಗುರುತುಗಳು ಇನ್ನೂ ಮಾಸಿಲ್ಲ. ರಾತ್ರಿಯೆಲ್ಲಾ ಕೂತು ತೆಂಗಿನ ಗರಿಯ ವೇಷಭೂಷಣಗಳನ್ನು ತಯಾರಿಸಿದ್ದು ಆಯಿತು. ಮೈಸೂರಿನ ಕಲಾವಿದರು ಮಂಗಳೂರಿನ ಕಲಾಪ್ರಕಾರಗಳನ್ನು ಪ್ರಸ್ತುತಪಡಿಸುವ ಸಂಭ್ರಮವನ್ನು ಕಣ್ಣು ತುಂಬಿಕೊಂಡೆ.
ಎಲ್ಲರೂ ಅವರ ಪ್ರಯತ್ನವನ್ನು ‘ದಿ ಬೆಸ್ಟ್’ ಎನ್ನುವಂತೆ ರಂಗದ ಮೇಲೆ ತಂದಿಟ್ಟರು. ಸತತ 45 ದಿನಗಳ ಶ್ರಮ ರಂಗದ ಮೇಲಿನ ಯಶಸ್ವಿ ಪ್ರದರ್ಶನದ ಮೂಲಕ ಸಾರ್ಥಕಗೊಂಡಿತು. 30 ನಿಮಿಷಗಳ ಕಾಲ ಕರಾವಳಿಯ ಕುಟ್ಟುವ – ಬೀಸುವ ಹಾಡುಗಳು, ನಾಟಿಯ ಹಾಡುಗಳು, ಕಂಗೀಲು ಕುಣಿತ, ಆಟಿ ಕಳಂಜ, ಹುಲಿ ವೇಷ, ಸುಗ್ಗಿ ಕುಣಿತ ಮೊದಲಾದವುಗಳನ್ನು ವೇದಿಕೆಯ ಮೇಲೆ ತಂದು ಕಿಕ್ಕಿರಿದು ತುಂಬಿದ್ದ ಸಭೆಯನ್ನು ಮಂತ್ರ ಮುಗ್ದಗೊಳಿಸಿದ್ದು, ನಮ್ಮ ‘ಅನ್ ಪ್ರೊಫೆಷನಲ್’ ಕಲಾವಿದರ ‘ಪ್ರೊಫೆಷನಲ್ ಪರ್ಫಾರ್ಮೆನ್ಸ್’ನ ಯಶಸ್ಸು. ವ್ಯವಹಾರ ಕ್ಷೇತ್ರಕ್ಕೆ ಕಾಲಿಟ್ಟ ನಂತರವೂ ನನ್ನ ಸಾಂಸ್ಕೃತಿಕ ಚೈತನ್ಯವನ್ನು ಜೀವಂತವಾಗಿಟ್ಟುಕೊಳ್ಳಲು ಸ್ವಾತಂತ್ರ್ಯ ಕೊಟ್ಟ ಪ್ರಸಾದ್ ಗೆ ಈ ಯಶಸ್ಸನ್ನ ಅರ್ಪಿಸುತ್ತೇನೆ.
ಶ್ವೇತಾ ಮಡಪ್ಪಾಡಿ